ಲಖನೌ (ಉತ್ತರ ಪ್ರದೇಶ): ಭಾರತದಲ್ಲಿ ಕ್ರಿಕೆಟ್ ಎಂಬ ಕ್ರೀಡೆ ಧರ್ಮವಾಗಿದೆ ಎಂದೇ ಹೇಳಲಾಗುತ್ತದೆ. ಇಷ್ಟೊಂದು ಜನಪ್ರಿಯ ಆಟದಲ್ಲಿ ದೇಶದ ತಂಡವನ್ನು ಪ್ರತಿನಿಧಿಸುವುದು ಒಂದು ಹೆಮ್ಮೆಯಾದರೆ, ಆ ತಂಡದ ಮುಂದಾಳತ್ವ ವಹಿಸುವುದು ಇನ್ನಷ್ಟೂ ಹೆಚ್ಚಿನ ಜವಾಬ್ದಾರಿ ಮತ್ತು ಗೌರವದ ಅಂಶವಾಗಿದೆ. ಟೀಮ್ ಇಂಡಿಯಾ ಹಲವಾರು ನಾಯಕರನ್ನು ಕಂಡಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ಪ್ರಸ್ತುತ ಮೂರು ಮಾದರಿಯ ನಾಯಕತ್ವವನ್ನು ಯಶಸ್ವಿಯಾಗಿ ನಿಬಾಯಿಸುತ್ತಿದ್ದಾರೆ.
ರೋಹಿತ್ ನಾಯಕತ್ವಕ್ಕೆ ಇಂದು ವಿಶೇಷತೆ ಇದೆ. ಅದು ಅವರ ನಾಯಕತ್ವದ ಅಡಿಯಲ್ಲಿ ಟೀಮ್ ಇಂಡಿಯಾ 100ನೇ ಪಂದ್ಯವನ್ನು ಆಡುತ್ತಿರುವುದು. ವಿಶ್ವಕಪ್ನಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಭಾರತ ಲಖನೌನ ಏಕನಾ ಕ್ರೀಡಾಂಗಣದಲ್ಲಿ ಆಡುತ್ತಿದೆ. ವಿಶ್ವಕಪ್ ಲೀಗ್ನಲ್ಲಿ ಸತತ 5 ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಪ್ಲೇ-ಆಫ್ ಪ್ರವೇಶ ಖಚಿತ ಪಡಿಸಿಕೊಳ್ಳಲು ಜಯ ಪ್ರಮುಖವಾಗುತ್ತದೆ.
ವಿರಾಟ್ ಕೊಹ್ಲಿ ತಂಡದ ನಾಯಕತ್ವವನ್ನು ತೊರೆದ ನಂತರ ರೋಹಿತ್ ಶರ್ಮಾ ಅವರಿಗೆ ನಾಯಕನಾಗಿ ಪಟ್ಟ ಕಟ್ಟಲಾಯಿತು. ಅಲ್ಲಿಂದ ರೋಹಿತ್ 100ನೇ ಪಂದ್ಯದ ನಾಯಕತ್ವ ವಹಿಸಿದ್ದಾರೆ. ರೋಹಿತ್ ಶರ್ಮಾ ಅವರು ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್, ವಿರಾಟ್ ಕೊಹ್ಲಿ, ಸೌರವ್ ಗಂಗೂಲಿ, ಕಪಿಲ್ ದೇವ್ ಮತ್ತು ಪ್ರಸ್ತುತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನಂತರ ತಂಡವನ್ನು ಮುನ್ನಡೆಸಿದ ಏಳನೇ ನಾಯಕರಾಗಿದ್ದಾರೆ. ರೋಹಿತ್ 39 ಏಕದಿನ, 51 ಟಿ20 ಮತ್ತು 9 ಟೆಸ್ಟ್‌ಗಳಲ್ಲಿ ರಾಷ್ಟ್ರೀಯ ತಂಡವನ್ನು ಮುನ್ನಡೆಸಿದ್ದಾರೆ. ಅವರ ಗೆಲುವಿನ ಪ್ರಮಾಣ ಶೇ. 73 ಆಗಿದೆ. ಒಟ್ಟು 99 ಪಂದ್ಯಗಳಲ್ಲಿ ರೋಹಿತ್ 23 ಪಂದ್ಯಗಳಲ್ಲಿ ಸೋಲು ಕಂಡಿದ್ದು, 2 ಡ್ರಾ ಮತ್ತು 1 ಫಲಿತಾಂಶ ರಹಿತ ಪಂದ್ಯವಾಗಿದೆ.