ಮುಂಬೈ (ಮಹಾರಾಷ್ಟ್ರ): ದೊಡ್ಡ ಹೊಡೆತಗಳಿಂದ ಹಿಟ್ ಮ್ಯಾನ್ ಎಂದೇ ಕರೆಸಿಕೊಳ್ಳುವ ರೋಹಿತ್ ಶರ್ಮಾ ವಿಶ್ವಕಪ್ನಲ್ಲಿ ಸಿಕ್ಸ್ಗಳ ದಾಖಲೆ ಬರೆದಿದ್ದಾರೆ. ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ನಡೆಯುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ. ಆರಂಭಿಕರಾಗಿ ಕಣಕ್ಕಿಳಿದು ಅಬ್ಬರಿಸುವ ಅವರು ಎದುರಾಳಿ ಬೌಲರ್ ವಿರುದ್ಧ ಮೊದಲ ಓವರ್ನಿಂದಲೇ ದೊಡ್ಡ ಹೊಡೆತಗಳಿಗೆ ಮುಂದಾಗುತ್ತಾರೆ.
ವಿಶ್ವಕಪ್ನಲ್ಲಿ ಭಾರತದ ನಾಯಕರಾಗಿ 500ಕ್ಕೂ ಹೆಚ್ಚು ರನ್ ಕಲೆಹಾಕಿದ ಆಟಗಾರ ಎಂಬ ದಾಖಲೆಯನ್ನು ಈಗಾಗಲೇ ಮಾಡಿದ್ದಾರೆ. ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ 2023ರ ವಿಶ್ವಕಪ್ನ ಮೊದಲ ಸೆಮೀಸ್ನಲ್ಲಿ ರೋಹಿತ್ ಗೇಲ್ ದಾಖಲೆ ಹಿಂದಿಕ್ಕಿದರು. ಇನ್ನಿಂಗ್ಸ್ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸ್ಗಳಿಂದ 47 ರನ್ ಕಲೆಹಾಕಿ ಔಟ್ ಆದ ಶರ್ಮಾ ವಿಶ್ವಕಪ್ನಲ್ಲಿ 50 ಸಿಕ್ಸ್ ಬಾರಿಸಿದ ರೆಕಾರ್ಡ್ ಬರೆದಿದ್ದಾರೆ. ಗೇಲ್ ವಿಶ್ವಕಪ್ನಲ್ಲಿ ಒಟ್ಟಾರೆ 49 ಸಿಕ್ಸ್ಗಳನ್ನು ಗಳಿಸಿದ್ದರು.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ 27 ಸಿಕ್ಸ್ಗಳನ್ನು ಗಳಿಸಿದ್ದಾರೆ. 2015 ವಿಶ್ವಕಪ್ನಲ್ಲಿ ಗೇಲ್ 26 ಸಿಕ್ಸ್ ಗಳಿಸಿದ್ದು ದಾಖಲೆ ಆಗಿತ್ತು. ಒಂದು ವಿಶ್ವಕಪ್ನಲ್ಲಿ ಅತಿ ಹೆಚ್ಚು ಸಿಕ್ಸ್ ಗಳಿಸಿದ ಆಟಗಾರ ಎಂಬ ಖ್ಯಾತಿಗೂ ಒಳಗಾದರು. ಅಲ್ಲದೇ ತಾವು ಹಿಟ್ ಮ್ಯಾನ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ನಡೆಯುತ್ತಿರುವ ವಿಶ್ವಕಪ್ನಲ್ಲಿ ರೋಹಿತ್ ಶರ್ಮಾ 10 ಇನ್ನಿಂಗ್ಸ್ನಿಂದ 124.43ರ ಸ್ಟ್ರೈಕ್ರೇಟ್ನಲ್ಲಿ 61.11ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿ 550 ಕಲೆಹಾಕಿದ್ದಾರೆ. ಇದರಲ್ಲಿ ಅವರ ಬ್ಯಾಟ್ನಿಂದ 1 ಶತಕ ಮತ್ತು 3 ಅರ್ಧಶತಕ ದಾಖಲಾಗಿದೆ. 62 ಬೌಂಡರಿ ಮತ್ತು 27 ಸಿಕ್ಸ್ ಅನ್ನು ರೋಹಿತ್ ಶರ್ಮಾ ಈ ವಿಶ್ವಕಪ್ನಲ್ಲಿ ಹೊಡೆದಿದ್ದಾರೆ.
ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ರೋಹಿತ್ ಶರ್ಮಾ ತಂಡಕ್ಕೆ ಉತ್ತಮ ಆಂಭವನ್ನು ತಂದುಕೊಟ್ಟರು. 2023ರ ವಿಶ್ವಕಪ್ನಲ್ಲಿ ನಿಸ್ವಾರ್ಥವಾಗಿ ಆಡುತ್ತಿರುವ ಬ್ಯಾಟರ್ ಎಂದು ಕರೆಸಿಕೊಳ್ಳುತ್ತಿರುವ ಹಿಟ್ಮ್ಯಾನ್ ಇಂದು ಅದೇ ರೀತಿ ಆಡಿದರು. 29 ಬಾಲ್ನಲ್ಲಿ 4 ಬೌಂಡರಿ ಮತ್ತು 4 ಸಿಕ್ಸ್ ಗಳಿಸಿ 47 ರನ್ ಮಾಡಿಕೊಂಡಿದ್ದ ರೋಹಿತ್ ಸಿಂಗಲ್ ಸ್ಕೋರ್ ಮಾಡಿ ಅರ್ಧಶತಕ ಪೂರೈಸಿಕೊಳ್ಳುವ ಬದಲು, ಸಿಕ್ಸ್ಗೆ ಪ್ರಯತ್ನಿಸಿ ಕ್ಯಾಚ್ ಕೊಟ್ಟು ಔಟ್ ಆದರು.
ರೋಹಿತ್ ವಿಕೆಟ್ ನಂತರ ವಿರಾಟ್ ಕೊಹ್ಲಿ ಮತ್ತು ಶುಭಮನ್ ಗಿಲ್ ಪಾಲುದಾರಿಕೆ ಹಂಚಿಕೊಂಡರು. ಶತಕದತ್ತ ಸಾಗುತ್ತಿದ್ದ ಗಿಲ್ (79) ಮುಂಬೈನ ಬಿಸಿಲಿನ ಝಳಕ್ಕೆ ಸುಸ್ತಾಗಿ ಮೈದಾನದಿಂದ ಹೊರ ನಡೆಯಬೇಕಾಯಿತು. ವಿರಾಟ್ ಮತ್ತು ಅಯ್ಯರ್ ಗಿಲ್ ನಿರ್ಗಮನದ ನಂತರ ಇನ್ನಿಂಗ್ಸ್ ಬೆಳೆಸಿದರು. ಈ ಜೋಡಿ 163 ರನ್ಗಳ ಪಾಲುದಾರಿಕೆ ಮಾಡಿತು. ಇದರ ಜೊತೆಗೆ ವಿರಾಟ್ ದಾಖಲೆಯ ಶತಕವನ್ನು ಸಿಡಿಸಿದರು. 117 ವಿರಾಟ್ ಔಟ್ ಆದರೆ ಇನ್ನಿಂಗ್ಸ್ ಮುಂದುವರೆಸಿದ ಅಯ್ಯರ್ 105 ರನ್ ಗಳಿಸಿ ಕೊನೆಯಲ್ಲಿ ವಿಕೆಟ್ ಒಪ್ಪಿಸಿದರು. ಡೆತ್ ಓವರ್ನಲ್ಲಿ ಬಂದ ರಾಹುಲ್ (39) ಸಹ ಅಬ್ಬರಿಸಿದರು. ಇದರಿಂದ ಟೀಮ್ ಇಂಡಿಯಾ ನಿಗದಿತ 50 ಓವರ್ ಅಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 397 ರನ್ ಕಲೆಹಾಕಿತು.
ಇದನ್ನೂ ಓದಿ:ಭಾರತ-ನ್ಯೂಜಿಲೆಂಡ್ ಮೊದಲ ಸೆಮಿಫೈನಲ್: ಪಂದ್ಯಕ್ಕೂ ಮುನ್ನ ಪಿಚ್ ವಿವಾದ