ವಾಷಿಂಗ್ಟನ್ (ಯುಎಸ್): ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರು ಮುಂದಿನ ವರ್ಷ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ20 ವಿಶಕಪ್ ಆಡಲು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ. ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ 10 ವಿಕೆಟ್ಗಳ ಸೋಲು ಕಂಡು ಟ್ರೋಫಿ ಗೆಲ್ಲುವ ಅವಕಾಶದಿಂದ ವಂಚಿತವಾಗಿತ್ತು. ಈ ಪಂದ್ಯದ ನಂತರ ಭಾರತ ತಂಡ ಆಡಿದ ಟಿ20 ಪಂದ್ಯಗಳಲ್ಲಿ ಶರ್ಮಾ ಕಾಣಿಸಿಕೊಂಡಿಲ್ಲ. ಆಲ್ರೌಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲೇ ಮೆನ್ ಇನ್ ಬ್ಲೂ ಸರಣಿಗಳನ್ನು ಆಡುತ್ತಿದೆ. ಟಿ20 ತಂಡದಲ್ಲಿ ಯುವ ಪ್ರತಿಭೆಗಳಾದ ಶುಭಮನ್ ಗಿಲ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ ಹಾಗು ದೀಪಕ್ ಹೂಡಾ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವಕಪ್ ನಂತರ ಅನುಭವಿ ಬ್ಯಾಟರ್ಗಳಾದ ವಿರಾಟ್ ಮತ್ತು ರೋಹಿತ್ ಟಿ20 ಪಂದ್ಯದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ. ಆದರೆ ಟ್ವಿಟರ್ನಲ್ಲಿ ವೈರಲ್ ಆಗುತ್ತಿರುವ ಒಂದು ವಿಡಿಯೋದಲ್ಲಿ ರೋಹಿತ್ ಶರ್ಮಾ ಮುಂಬರುವ ಟಿ20 ವಿಶ್ವಕಪ್ನಲ್ಲಿ ಆಡಲು ಎದುರು ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ವೆಸ್ಟ್ ಇಂಡೀಸ್ ಪ್ರವಾಸದ ಬಳಿಕ ವಿಶ್ರಾಂತಿಯಲ್ಲಿರುವ ರೋಹಿತ್ ಸದ್ಯ ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಮಾತನಾಡಿರುವ ವಿಡಿಯೋದಲ್ಲಿ,"ಅಮೆರಿಕಕ್ಕೆ ನಾನು ಎಂಜಾಯ್ ಮಾಡಲು ಬಂದಿಲ್ಲ. ಇನ್ನೊಂದು ಕಾರಣವೂ ಇದೆ. ಮುಂದಿನ ಜೂನ್‌ನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ, ನಾನು ಟೂರ್ನಿಯನ್ನು ಎದುರು ನೋಡುತ್ತಿದ್ದೇವೆ" ಎಂದಿದ್ದಾರೆ.