ಅಹಮದಾಬಾದ್:ಆಸಿಸ್ ವಿರುದ್ಧದ ನಾಲ್ಕನೇ ಟೆಸ್ಟ್ನಲ್ಲಿ ಭಾರತದ ನಾಯಕ ರೋಹಿತ್ ಶರ್ಮಾ ಮತ್ತು ಚೇತೇಶ್ವರ ಪೂಜಾರ ವಿಶಿಷ್ಟ ದಾಖಲೆಗಳನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನದಲ್ಲಿ 17,000 ರನ್ ರೋಹಿತ್ ಪೂರೈಸಿದರೆ, ಚೇತೇಶ್ವರ ಪೂಜಾರ ಆಸಿಸ್ ವಿರುದ್ಧ 2000 ರನ್ ಗಳಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿ 2023 ರ ನಾಲ್ಕನೇ ಪಂದ್ಯದಲ್ಲಿ 21 ರನ್ ಗಳಿಸಿದ ಭಾರತೀಯ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 17000 ರನ್ ಮಾಡಿದ ದಾಖಲೆ ಮಾಡಿದರು. ಈ ಘಟ್ಟ ತಲುಪಿದ ಭಾರತದ 7 ನೇ ಆಟಗಾರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 28 ನೇ ಆಟಗಾರರಾಗಿದ್ದಾರೆ.
ರೋಹಿತ್ ಶರ್ಮಾ ಮೊದಲು, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಮಹೇಂದ್ರ ಸಿಂಗ್ ಧೋನಿ ಮತ್ತು ವೀರೇಂದ್ರ ಸೆಹ್ವಾಗ್ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ 664 ಪಂದ್ಯಗಳಲ್ಲಿ 48.52 ರ ಸರಾಸರಿಯಲ್ಲಿ ಬ್ಯಾಟ್ ಮಾಡಿದ್ದು, 34,357 ರನ್ ಗಳಿಸಿದ್ದಾರೆ.
ಸಚಿನ್ ತೆಂಡೂಲ್ಕರ್ 34,357
ವಿರಾಟ್ ಕೊಹ್ಲಿ 25,047*
ರಾಹುಲ್ ದ್ರಾವಿಡ್ 24,208
ಸೌರವ್ ಗಂಗೂಲಿ 18,575
ಎಂಎಸ್ ಧೋನಿ 17,266
ವೀರೇಂದ್ರ ಸೆಹ್ವಾಗ್ 17,253
ರೋಹಿತ್ ಶರ್ಮಾ 17,000*
ರೋಹಿತ್ ಶರ್ಮಾ ಅವರು ವೃತ್ತಿಜೀವನದ 438 ನೇ ಪಂದ್ಯವನ್ನು ಆಡುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 42.95ರ ಸರಾಸರಿಯಲ್ಲಿ ಶರ್ಮಾ ರನ್ ಗಳಿಸುತ್ತಿದ್ದಾರೆ. ಎಲ್ಲಾ ಮಾದರಿಯಿಂದ 43 ಶತಕ ಹಾಗೂ 91 ಅರ್ಧಶತಕ ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 264 ರನ್ ಗಳಿಸಿರುವುದು ಈ ಮಾದರಿಯ ಕ್ರಿಕೆಟ್ನ ದಾಖಲೆಯ ರನ್ ಆಗಿದೆ.