ಹೈದರಾಬಾದ್: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಸುಮಾರು 14 ತಿಂಗಳ ನಂತರ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ತಂಡಕ್ಕೆ ಮರಳಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಗಾಯದ ಕಾರಣದಿಂದ ತಂಡದಿಂದ ಹೊರಗುಳಿದಿದ್ದಾರೆ.
ಮೊಹಾಲಿಯಲ್ಲಿ ಜನವರಿ 11ರಿಂದ ಭಾರತ ಮತ್ತು ಅಫ್ಘಾನಿಸ್ತಾನ ಟಿ-20 ಸರಣಿ ಪ್ರಾರಂಭವಾಗಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಚುಟುಕು ಸರಣಿಗೆ ತಂಡವನ್ನು ಆಯ್ಕೆ ಮಾಡಿದೆ. 2022ರ ಟಿ-20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ರೋಹಿತ್ ಮತ್ತು ವಿರಾಟ್ ಅಡಿಲೇಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ-20 ಪಂದ್ಯವನ್ನು ಆಡಿದ್ದರು. 2024ರ ವಿಶ್ವಕಪ್ ಜೂನ್‌ನಲ್ಲಿ ನಡೆಯಲಿರುವುದರಿಂದ ತಂಡಕ್ಕೆ ಇಬ್ಬರು ಸ್ಟಾರ್ ಬ್ಯಾಟರ್‌ಗಳು ಕಂಬ್ಯಾಕ್ ಮಾಡಿದ್ದಾರೆ.
ಇದೇ ವೇಳೆ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವಿಶ್ರಾಂತಿ ಕೇಳಿದ್ದರು. ಅವರನ್ನು ಮೂರು ಪಂದ್ಯಗಳ ಸರಣಿಗೆ ಆಯ್ಕೆ ಮಾಡಿಲ್ಲ. ಮತ್ತೊಂದೆಡೆ, ಶ್ರೇಯಸ್ ಅಯ್ಯರ್, ಕೆ.ಎಲ್.ರಾಹುಲ್, ರವೀಂದ್ರ ಜಡೇಜಾ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಯುವ ಆರಂಭಿಕರಾದ ರುತುರಾಜ್ ಗಾಯಕ್‌ವಾಡ್ ಮತ್ತು ಇಶಾನ್ ಕಿಶನ್ ಕೂಡ ಹೊರಗುಳಿದಿದ್ದಾರೆ. ಆದರೆ, ರೋಹಿತ್ ಮತ್ತು ಕೊಹ್ಲಿ ಜೋಡಿಯನ್ನು ತಂಡದ ಸೇರಿಕೊಂಡಿರುವುದು ಜೂನ್‌ನಲ್ಲಿ ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಾಗಿ ಭಾರತ ತಂಡ ಸಜ್ಜಾಗುತ್ತಿದೆ ಎಂಬುದು ಸ್ಪಷ್ಟವಾಗಿದೆ.
ಆಯ್ಕೆದಾರರು ಎಡಗೈ ಸೀಮರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್ ಮತ್ತು ಮುಖೇಶ್ ಕುಮಾರ್ ಅವರನ್ನು ಒಳಗೊಂಡ ಯುವ ವೇಗಿಗಳ ಮೇಲೆ ಗಮನ ಹರಿಸಿದ್ದಾರೆ. ಆಲ್ ರೌಂಡರ್ಗಳಾದ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಮತ್ತು ಅಕ್ಷರ್ ಪಟೇಲ್ ಕೂಡ 16 ಸದಸ್ಯರ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕುಲದೀಪ್ ಯಾದವ್ ಮತ್ತು ರವಿ ಬಿಷ್ಣೋಯ್ ತಂಡದ ಸ್ಪಿನ್ ಬಲವಾಗಿದ್ದಾರೆ. ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಯುವ ಆರಂಭಿಕರಾದ ಗಿಲ್ ಅಥವಾ ಜೈಸ್ವಾಲ್ ಇನ್ನಿಂಗ್ಸ್ ತೆರೆಯುವ ಸಾಧ್ಯತೆಯಿದೆ ಮತ್ತು ರಿಂಕು ಸಿಂಗ್ ಕೊನೆ ಓವರ್ಗಳ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ.
ಭಾರತ ತಂಡ ಇಂತಿದೆ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಮುಖೇಶ್ ಕುಮಾರ್.
ಅಫ್ಘಾನಿಸ್ತಾನ ತಂಡ ಇಂತಿದೆ: ಈಗಾಗಲೇ ಅಫ್ಘಾನಿಸ್ತಾನ ಕೂಡ ತನ್ನ ತಂಡವನ್ನು ಪ್ರಕಟಿಸಿದೆ. ಇಬ್ರಾಹಿಂ ಜದ್ರಾನ್ (ನಾಯಕ), ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಹಜರತುಲ್ಲಾ ಝಜೈ, ರಹಮತ್ ಷಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜ್ಮತುಲ್ಲಾ ಒಮರ್ಜಾಯ್, ಶರಫುದ್ದೀನ್ ಅಶ್ರಫ್, ಮುಜೀಬ್ ಉರ್ ರಹಮಾನ್, ಫಝಲ್ ಹಕ್ ಫಾರೂಕಿ, ಫರೀದ್ ಅಹ್ಮದ್, ನವೀನ್ ಉಲ್ ಹಕ್, ನೂರ್ ಅಹ್ಮದ್, ಮೊಹಮ್ಮದ್ ಸಲೀಂ, ಖೈಸ್ ಅಹ್ಮದ್, ಗುಲ್ಬದಿನ್ ನೈಬ್ ಮತ್ತು ರಶೀದ್ ಖಾನ್.
ಇದನ್ನೂ ಓದಿ:ರಣಜಿ ಟ್ರೋಫಿಯಲ್ಲಿ ಪೂಜಾರ 17ನೇ ದ್ವಿಶತಕದ ಸಾಧನೆ: ಅತಿ ಹೆಚ್ಚು ರನ್ ಗಳಿಸಿದ 4ನೇ ಬ್ಯಾಟರ್ ಎಂಬ ಹೆಗ್ಗಳಿಕೆ