ದುಬೈ(ಯುಎಇ):ಬಹುನಿರೀಕ್ಷಿತ ಏಷ್ಯಾಕಪ್ನ ಹೈವೋಲ್ಟೇಜ್ ಪಂದ್ಯ ನಾಳೆ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ದುಬೈನಲ್ಲಿ ಈಗಾಗಲೇ ವೇದಿಕೆ ಸಜ್ಜಾಗಿದೆ. ಇದರ ಮಧ್ಯೆ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳ ಕ್ಯಾಪ್ಟನ್ಸ್ ಮುಖಾಮುಖಿಯಾಗಿದ್ದು, ಕೆಲಹೊತ್ತು ಮಾತುಕತೆ ನಡೆಸಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಡಿಯೋ ಹಂಚಿಕೊಂಡಿದ್ದು, ರೋಹಿತ್ ಶರ್ಮಾ ಹಾಗೂ ಬಾಬರ್ ಆಜಂ ಸುದೀರ್ಘ ಮಾತುಕತೆಯಲ್ಲಿ ತೊಡಗಿದ್ದಾರೆ. ಎರಡು ತಂಡಗಳ ಕ್ಯಾಪ್ಟನ್ಗಳು ಉಭಯ ಕುಶಲೋಪರಿ ಹಾಗೂ ಕ್ರಿಕೆಟ್ ಬಗ್ಗೆ ತುಸು ಹೊತ್ತು ಮಾತಿನ ಹರಟೆ ನಡೆಸಿದ್ದಾರೆ. ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ಪಂದ್ಯ ನಡೆಯಲಿರುವ ಕಾರಣ, ಉಭಯ ತಂಡಗಳು ನೆಟ್ಸ್ನಲ್ಲಿ ಬೆವರು ಹರಿಸಿದವು. ಈ ವೇಳೆ ಹೋಟೆಲ್ಗೆ ತೆರಳುವ ಸಂದರ್ಭದಲ್ಲಿ ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:Asia Cup 2022: ಪಾಕಿಸ್ತಾನ ಕ್ಯಾಪ್ಟನ್ ಬಾಬರ್ ಆಜಂ ಭೇಟಿ ಮಾಡಿದ ವಿರಾಟ್ ಕೊಹ್ಲಿ
ಕಳೆದ ಎರಡು ದಿನಗಳ ಹಿಂದೆ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಸ್ಪಿನ್ನರ್ ಯಜುವೇಂದ್ರ ಚಹಲ್ ಕೂಡ ಪಾಕ್ನ ವೇಗಿ ಶಾಹಿನ್ ಆಫ್ರಿದಿ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ವಿರಾಟ್ ಕೊಹ್ಲಿ ಪಾಕ್ ತಂಡದ ಕ್ಯಾಪ್ಟನ್ ಬಾಬರ್ ಆಜಂ ಅವರನ್ನು ಭೇಟಿ ಮಾಡಿದ್ದು, ಕುಶಲೋಪರಿ ವಿಚಾರಿಸಿದ್ದರು. ಇದರ ವಿಡಿಯೋ ತುಣುಕವೊಂದನ್ನು ಪಿಸಿಬಿ ಹಾಗೂ ಬಿಸಿಸಿಐ ಹಂಚಿಕೊಂಡಿದ್ದವು.
ಬಾಬರ್ ಆಜಂ ವಿಶ್ವದ ಅಗ್ರ ಬ್ಯಾಟರ್ಗಳಲ್ಲಿ ಒಬ್ಬರಾಗಿದ್ದು, ಟಿ20, ಏಕದಿನ ಮಾದರಿ ಬ್ಯಾಟಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಫಾರ್ಮ್ಗೆ ಮರಳಲು ಕೊಹ್ಲಿ ಬೆವರು ಹರಿಸುತ್ತಿದ್ದಾರೆ. ನಾಳೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೈದಾನಕ್ಕಿಳಿಯುವ ಮೂಲಕ ಟಿ-20ಯಲ್ಲಿ 100ನೇ ಪಂದ್ಯ ಆಡುವ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಲಿದ್ದಾರೆ.
ಇಂದಿನಿಂದ ಏಷ್ಯಾ ಕಪ್ ಟಿ20 ಟೂರ್ನಿ ಆರಂಭಗೊಳ್ಳಲಿದ್ದು, ಮೊದಲ ಪಂದ್ಯದಲ್ಲಿ ಶ್ರೀಲಂಕಾ-ಆಫ್ಘಾನಿಸ್ತಾನ ಸೆಣಸಾಟ ನಡೆಸಲಿವೆ. ನಾಳೆಯ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ತಂಡಗಳಾದ ಭಾರತ-ಪಾಕಿಸ್ತಾನ ಪೈಪೋಟಿ ನಡೆಸಲಿವೆ. ಈ ಸಲದ ಏಷ್ಯಾಕಪ್ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಹಾಂಗ್ಕಾಂಗ್ ತಂಡಗಳಿವೆ. ಸೆಪ್ಟೆಂಬರ್ 11ರಂದು ಫೈನಲ್ ಪಂದ್ಯ ನಡೆಯಲಿವೆ. 1984ರಿಂದ ನಡೆಯುತ್ತಿರುವ ಏಷ್ಯಾಕಪ್ನಲ್ಲಿ ಭಾರತ ಒಟ್ಟು 7 ಸಲ ಚಾಂಪಿಯನ್ ಆಗಿದೆ.