ನವದೆಹಲಿ:ಈಗಾಗಲೇ ಟಿ-20 ಕ್ರಿಕೆಟ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾಗೆ ಇದೀಗ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಲಾಗಿದ್ದು, ಏಕದಿನ ತಂಡದ ನಾಯಕನನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಮೂಲಕ ಏಕದಿನ ಹಾಗೂ ಟಿ-20 ತಂಡಕ್ಕೆ ಹಿಟ್ಮ್ಯಾನ್ ಅವರಿಗೆ ಕಪ್ತಾನ ಸ್ಥಾನ ನೀಡಲಾಗಿದೆ. ಉಳಿದಂತೆ ಟೆಸ್ಟ್ ತಂಡದಲ್ಲಿ ಉಪನಾಯಕನಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ.
ಟಿ-20 ವಿಶ್ವಕಪ್ ಮುಕ್ತಾಯಗೊಳ್ಳುತ್ತಿದ್ದಂತೆ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ದರು. ಇದರ ಬೆನ್ನಲ್ಲೇ ಕೊಹ್ಲಿ ಏಕದಿನ ತಂಡದ ನಾಯಕತ್ವಕ್ಕೂ ವಿದಾಯ ಘೋಷಣೆ ಮಾಡಲಿದ್ದಾರೆ ಎಂಬ ಮಾತುಗಳು ಹರಿದಾಡಿದ್ದವು. ಇದೀಗ ಅಧಿಕೃತವಾಗಿ ಬಿಸಿಸಿಐ ಮಾಹಿತಿ ಹೊರಹಾಕಿದ್ದು, ಏಕದಿನ ತಂಡದ ನಾಯಕತ್ವದ ಸ್ಥಾನದಿಂದಲೂ ಅವರನ್ನ ಕೆಳಗಿಳಿಸಲಾಗಿದೆ.
ವಿರಾಟ್ ಕೊಹ್ಲಿ ಇದೀಗ ಟೆಸ್ಟ್ ತಂಡದ ನಾಯಕನಾಗಿ ಮಾತ್ರ ಮುಂದುವರೆಯಲಿದ್ದಾರೆ. ಇವರ ಉಪನಾಯಕನಾಗಿ ರೋಹಿತ್ ಶರ್ಮಾ ಸಾಥ್ ನೀಡಲಿದ್ದಾರೆ. ಇಷ್ಟು ದಿನ ಟೆಸ್ಟ್ನಲ್ಲಿ ಉಪನಾಯಕನಾಗಿದ್ದ ರಹಾನೆಗೆ ಬಿಸಿಸಿಐ ಕೊಕ್ ನೀಡಿದೆ.
ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಡಿಸೆಂಬರ್ 26ರಿಂದ ಟೆಸ್ಟ್ನಲ್ಲಿ ಭಾಗಿಯಾಗಲಿದ್ದು, ತದನಂತರ ಏಕದಿನ ಸರಣಿಯಲ್ಲಿ ಭಾಗಿಯಾಗಲಿದೆ. ಉಭಯ ತಂಡಗಳ ನಡುವೆ ಮೊದಲ ಟೆಸ್ಟ್ ಪಂದ್ಯ ಡಿಸೆಂಬರ್ 26 ರಿಂದ 30 ಸೆಂಚುರಿಯನ್ ಸ್ಟೇಡಿಯಂನಲ್ಲಿ, ಎರಡನೇ ಟೆಸ್ಟ್ ಜನವರಿ 3 ರಿಂದ 07 ಜೋಹಾನ್ಸ್ಬರ್ಗ್ನಲ್ಲಿ, ಮೂರನೇ ಟೆಸ್ಟ್ ಜನವರಿ 11 ರಿಂದ 15 ಕೇಪ್ ಟೌನ್ನಲ್ಲಿ ನಡೆಯಲಿದೆ. ಉಳಿದಂತೆ ಮೊದಲ ಏಕದಿನ ಪಂದ್ಯ ಜನವರಿ 19, 2ನೇ ಏಕದಿನ ಪಂದ್ಯ ಜನವರಿ 21 ಹಾಗೂ 3ನೇ ಏಕದಿನ ಪಂದ್ಯ 23ರಂದು ಜನವರಿ ತಿಂಗಳಲ್ಲಿ ಕೇಪ್ ಟೌನ್ನಲ್ಲಿ ನಡೆಯಲಿದೆ.