ಕರ್ನಾಟಕ

karnataka

ETV Bharat / sports

ಸೂಪರ್​ ಓವರ್​ನಲ್ಲಿ ರಿಟೈರ್ಡ್​​​ ಆಗಿ ಮತ್ತೆ ಬ್ಯಾಟಿಂಗ್​ಗಿಳಿದ ರೋಹಿತ್​: ಐಸಿಸಿ ರೂಲ್ಸ್​​ ಹೇಳುವುದೇನು? - ಭಾರತ ಅಫ್ಘಾನಿಸ್ತಾನ ಟಿ20

India vs Afghanistan T20I: ಅಫ್ಘಾನಿಸ್ತಾನ ವಿರುದ್ಧ ಸೂಪರ್​ ಓವರ್​​​ ಬ್ಯಾಟಿಂಗ್​ ವೇಳೆ ಎರಡೂ ಬಾರಿ ಟೀಂ ಇಂಡಿಯಾ ನಾಯಕ ರೋಹಿತ್​ ಶರ್ಮಾ ಆಡಿರುವುದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಈ ಬಗ್ಗೆ ಐಸಿಸಿ ನಿಯಮಗಳು ಹೇಳುವುದೇನು ಎಂಬ ಮಾಹಿತಿ ಇಲ್ಲಿದೆ.

Rohit's return with bat in second Super Over against Afghanistan after 'retired hurt' sparks debate
ರೋಹಿತ್

By ETV Bharat Karnataka Team

Published : Jan 18, 2024, 12:53 PM IST

ಬೆಂಗಳೂರು:ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ರೋಚಕ ಸೂಪರ್​ ಓವರ್​ ಹಣಾಹಣಿಯಲ್ಲಿ ಅಫ್ಘಾನಿಸ್ತಾನವನ್ನು ಮಣಿಸಿದ ಭಾರತ 3-0 ವೈಟ್‌ವಾಶ್​​ನೊಂದಿಗೆ ಟಿ20 ಸರಣಿ ಜಯಿಸಿದೆ. ಈ ನಡುವೆ, ರೋಹಿತ್ ಶರ್ಮಾ ಎರಡೂ ಸೂಪರ್ ಓವರ್​​ಗಳಲ್ಲೂ ಬ್ಯಾಟಿಂಗ್ ​ಮಾಡಿರುವುದು ವಿವಾದ, ಚರ್ಚೆಗೆ ಗ್ರಾಸವಾಗಿದೆ.

ಅಜೇಯ ಶತಕದೊಂದಿಗೆ (121 ರನ್) ಹಾಗೂ ಎರಡೂ ಸೂಪರ್​ ಮುಖಾಮುಖಿ​​ಗಳಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ ಹಿಟ್​ಮ್ಯಾನ್​ ಭಾರತದ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದರು. ಮೊದಲ ಸೂಪರ್​​ ಓವರ್​ನ ಕೊನೆಯ ಎಸೆತದಲ್ಲಿ ಭಾರತದ ಗೆಲುವಿಗೆ 2 ರನ್​ ಅಗತ್ಯವಿತ್ತು. ಈ ಸಂದರ್ಭದಲ್ಲಿ ನಾನ್​ಸ್ಟ್ರೈಕ್​ನಲ್ಲಿದ್ದ ರೋಹಿತ್ ದಿಢೀರ್​ ನಿವೃತ್ತಿಗೊಂಡು ಮೈದಾನದಿಂದ ಹೊರನಡೆದರು. ಅವರ ಬದಲಿಗೆ ರಿಂಕು ಸಿಂಗ್​​ ಕ್ರೀಸ್​ಗೆ ಆಗಮಿಸಿದರು. ಬಳಿಕ ಸ್ಟ್ರೈಕ್​ನಲ್ಲಿದ್ದ ಜೈಸ್ವಾಲ್​ ಒಂದು ರನ್​ ಮಾತ್ರ ಗಳಿಸಿದ್ದರಿಂದ (16- 16 ರನ್​) ಪಂದ್ಯ ಮತ್ತೆ ಟೈ ಆಯಿತು. ಆದರೆ, ನಂತರದ ಎರಡನೇ ಸೂಪರ್​ ಓವರ್​ಗೂ ಕೂಡ ರೋಹಿತ್, ರಿಂಕು ಜೊತೆಗೂಡಿ​ ಮತ್ತೆ ಬ್ಯಾಟಿಂಗ್​ಗೆ ಮರಳಿದರು. ಈ ನಡೆಯು ಆಟದ ನಿಯಮ ಮತ್ತು ನಿಬಂಧನೆಗಳ ಬಗ್ಗೆ ಪ್ರಶ್ನೆ ಮೂಡಿಸಿದೆ.

ನಿಯಮ ಹೇಳುವುದೇನು?:ಐಸಿಸಿ ನಿಯಮಗಳ ಪ್ರಕಾರ ಪುರುಷರ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 'ಮೊದಲ ಸೂಪರ್​ ಓವರ್‌ನಲ್ಲಿ ಆಡಿದ ಬ್ಯಾಟರ್​ ಅಜೇಯರಾಗುಳಿದಿದ್ದರೆ, ಬಳಿಕ ಮತ್ತೊಂದು ಸೂಪರ್ ಓವರ್‌ನಲ್ಲಿಯೂ ಬ್ಯಾಟಿಂಗ್​ ಮಾಡಲು ಅವಕಾಶವಿದೆ.' ಈ ನಿಯಮದ ಆಧಾರದಲ್ಲಿ ರೋಹಿತ್ ಒಮ್ಮೆ​ ನಿವೃತ್ತರಾಗಿ ತೆರಳಿದ್ದರೂ ಮತ್ತೊಮ್ಮೆ ಬ್ಯಾಟಿಂಗ್​ಗೆ ಬಂದಿದ್ದರು.

ಗೆಲುವಿಗೆ ಒಂದು ಎಸೆತದಲ್ಲಿ 2 ರನ್​ ಅಗತ್ಯವಿದ್ದಾಗ ರನ್​ ಓಡುವಾಗ ಚುರುಕುತನದ ಹಿನ್ನೆಲೆಯಲ್ಲಿ ರಿಂಕು ಸಿಂಗ್​ರನ್ನು ಕರೆತರಲಾಗಿತ್ತು ಎನ್ನಲಾಗಿದೆ. ಆದರೆ, ರೋಹಿತ್ 'ರಿಟೈರ್ಡ್​​ ಔಟ್​' ಆದ್ರಾ ಅಥವಾ 'ರಿಟೈರ್ಡ್ ನಾಟೌಟ್' ಆಗಿದ್ರಾ ಎಂಬುದು ನೋಡುಗರು ಸೇರಿ ಎಲ್ಲರ ಗೊಂದಲಕ್ಕೆ ಕಾರಣವಾಯಿತು.

ಅಲ್ಲದೆ, ಐಸಿಸಿ ಷರತ್ತು 25.4.2 ಪ್ರಕಾರ, 'ಅನಾರೋಗ್ಯ, ಗಾಯ ಅಥವಾ ಇತರ ಯಾವುದೇ ಅನಿವಾರ್ಯ ಕಾರಣದಿಂದ ಬ್ಯಾಟರ್ ಮೈದಾನದಿಂದ ​ನಿವೃತ್ತರಾಗಿದ್ದರೆ, ಆತ ಮತ್ತೆ ಆಟ ಪುನಾರಂಭಿಸಲು ಅರ್ಹನಾಗಿರುತ್ತಾನೆ. ಇದನ್ನು ರಿಟೈರ್ಡ್ ನಾಟೌಟ್ ಎಂದು ಪರಿಗಣಿಸಲಾಗುತ್ತದೆ. ಆದರೆ, ಷರತ್ತು 25.4.2ರಲ್ಲಿ ಉಲ್ಲೇಖಿತ ಕಾರಣಗಳನ್ನು ಹೊರತಾಗಿ ಯಾವುದೇ ಬ್ಯಾಟರ್​​ ನಿವೃತ್ತರಾದರೆ, ಆತ ಮರಳಿ ಆಡಬೇಕಾದರೆ ಎದುರಾಳಿ ನಾಯಕನ ಒಪ್ಪಿಗೆ ಅಗತ್ಯವಾಗಿದೆ'.

ಮೇಲಿನ ಎರಡು ಷರತ್ತುಗಳನ್ನು ಆಧರಿಸಿ, ಎದುರಾಳಿ ನಾಯಕ ಇಬ್ರಾಹಿಂ ಜದ್ರಾನ್ ಒಪ್ಪಿಗೆಯೊಂದಿಗೆ ರೋಹಿತ್ ಮರಳಿ ಬ್ಯಾಟಿಂಗ್​​ ಮಾಡಿದ್ದಾರೆ ಎನ್ನಲಾಗಿದೆ. ಈ ನಡುವೆ ಪಂದ್ಯದ ಬಳಿಕ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನದ ಮುಖ್ಯ ಕೋಚ್ ಜೊನಾಥನ್ ಟ್ರಾಟ್ ಹೇಳಿಕೆಯು ಡಬಲ್ ಸೂಪರ್ ಓವರ್ ವೇಳೆ ಎರಡೂ ತಂಡಗಳು ಗೊಂದಲಕ್ಕೀಡಾಗಿದ್ದನ್ನು ಎತ್ತಿ ತೋರಿಸಿತು.

ಈ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಟ್ರಾಟ್​, ನನಗೆ ಅದರ ಬಗ್ಗೆ ಯಾವುದೇ ಕಲ್ಪನೆ ಇಲ್ಲ ಎಂದು ಹೇಳಿದರು. "ಎರಡು ಸೂಪರ್ ಓವರ್‌ಗಳು ಎಂದಾದರೂ ನಡೆದಿವೆಯೇ? ಇದು ಹೊಸತೆಂದು ನನಗೆ ಅನಿಸುತ್ತಿದೆ. ನಾವು ಈ ಹೊಸ ನಿಯಮಗಳ ಅನುಸಾರ ಆಡಬೇಕಿದೆ. ಹೊಸ ರೂಲ್ಸ್​, ಗೈಡ್​​ಲೈನ್ಸ್​ಗಳನ್ನು ಈ ಮೂಲಕ ಪ್ರಯೋಗಿಸಿದಂತಾಗಿದೆ'' ಎಂದಿದ್ದಾರೆ.

ಮತ್ತೊಂದೆಡೆ, ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೂಪರ್​ ಓವರ್​ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ''ರೋಹಿತ್​ ಶರ್ಮಾರನ್ನು ಮೈದಾನದಿಂದ ಹೊರಗೆ ಕರೆದಿದ್ದು 'ಅಶ್ವಿನ್' ತರಹದ ಪ್ಲಾನ್​ ಆಗಿತ್ತು. ರೋಹಿತ್​ ಅದ್ಭುತ ಆಟ ತೋರಿದರು'' ಎಂದು ದ್ರಾವಿಡ್ ಹೇಳಿದ್ದಾರೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ರೋ'ಹಿಟ್'​ ಶರ್ಮಾ

ABOUT THE AUTHOR

...view details