ಹೈದರಾಬಾದ್:ಭಾರತ ತಂಡದ ಮುಂಚೂಣಿ ವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಪಟೇಲ್ ಸತತ ವೈಫಲ್ಯ ಕಾಣುತ್ತಿದ್ದರೂ, ಅವರ ಆಟವನ್ನು ನಾಯಕ ರೋಹಿತ್ ಶರ್ಮಾ ಸಮರ್ಥಿಸಿಕೊಂಡಿದ್ದಾರೆ. ಟಿ-20 ವಿಶ್ವಕಪ್ ವೇಳೆಗೆ ಅವರು ಫಾರ್ಮ್ಗೆ ಮರಳುತ್ತಾರೆ ಎಂಬ ವಿಶ್ವಾಸವನ್ನು ರೋಹಿತ್ ವ್ಯಕ್ತಪಡಿಸಿದ್ದಾರೆ.
ಡೆತ್ಓವರ್ ಸ್ಪೆಷಲಿಸ್ಟ್ ಭುವಿಗೆ ಡೆತ್ಓವರೇ ಮಾರಕ: ಡೆತ್ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲ್ ಮಾಡಿದರೆ ಎದುರಾಳಿ ತಂಡ ಸಣ್ಣಗೆ ನಡುಗುತ್ತಿತ್ತು. ರನ್ ಗಳಿಸಲು ಪರದಾಡಬೇಕಿತ್ತು. ಆದರೆ, ಏಷ್ಯಾಕಪ್ ವೇಳೆಯಿಂದ ಭುವನೇಶ್ವರ್ ಕುಮಾರ್ ಬೌಲಿಂಗ್ ಮೊನಚು ಕಳೆದುಕೊಂಡಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಭುವಿ 19ಕ್ಕೂ ಅಧಿಕ ರನ್ ಚಚ್ಚಿಸಿಕೊಂಡು ಪಂದ್ಯ ಸೋಲಿಗೆ ಕಾರಣವಾಗಿದ್ದರು.
ಅದಾದ ಬಳಿಕ ಆಸೀಸ್ ಸರಣಿಯಲ್ಲೂ ಭುವನೇಶ್ವರ್ 12 ರ ಎಕಾನಮಿಯನ್ನು ಬೌಲಿಂಗ್ ಮಾಡಿ ಹೆಚ್ಚು ರನ್ ಬಿಟ್ಟುಕೊಡುತ್ತಿದ್ದಾರೆ. ಇದು ತಂಡದ ಮೇಲೆ ಭಾರಿ ಹೊರೆ ಬೀಳುತ್ತಿದ್ದು, ಸೋಲಿಗೂ ಕಾರಣವಾಗುತ್ತಿದೆ.
ಭುವಿ ದಾರಿಯಲ್ಲಿ ಹರ್ಷಲ್ ಪಟೇಲ್:ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವ ಹರ್ಷಲ್ ಪಟೇಲ್ ಕೂಡ ಭುವನೇಶ್ವರ್ ಹಾದಿಯಲ್ಲಿದ್ದಾರೆ. ಆಸೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಹರ್ಷಲ್ 8 ಓವರ್ ಬೌಲಿಂಗ್ ಮಾಡಿದ್ದು 99 ರನ್ಗಳನ್ನು ಚಚ್ಚಿಸಿಕೊಂಡು ದುಬಾರಿಯಾಗಿದ್ದಾರೆ. ಅಲ್ಲದೇ ವಿಕೆಟ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.