ಜೈಪುರ: ಟೀಂ ಇಂಡಿಯಾ ಹೊಸ ಕೋಚ್ ರಾಹುಲ್ ದ್ರಾವಿಡ್ ಮತ್ತು ಟಿ20 ತಂಡದ ನಾಯಕ ರೋಹಿತ್ ಶರ್ಮಾ ಅವರ ಜೊತೆ ಕೆಲಸ ಮಾಡಲು ಉತ್ಸುಕನಾಗಿದ್ದೇನೆ ಎಂದು ಟಿ20 ತಂಡದ ಉಪ ನಾಯಕ ಕೆ.ಎಲ್. ರಾಹುಲ್ ಹೇಳಿದರು.
ಟಿ20 ವಿಶ್ವಕಪ್ ಟೂರ್ನಿಯ ಬಳಿಕ ಭಾರತ ಮೊದಲ ಸರಣಿಯನ್ನು ತವರಿನಲ್ಲಿ ನ್ಯೂಜಿಲ್ಯಾಂಡ್ ಜೊತೆ ಆಡುತ್ತಿದ್ದು, ನವೆಂಬರ್ 17 ರಂದು ಮೊದಲ ಟಿ20 ಪಂದ್ಯ ನಡೆಯಲಿದೆ. ಇದಕ್ಕೂ ಮುನ್ನ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳಲು ಅದೃಷ್ಟ ಮಾಡಿದ್ದೆ" ಎಂದರು.
ವಿಭಿನ್ನ ಸಾಮರ್ಥ್ಯದೊಂದಿಗೆ ಮರಳಿ ಭಾರತ ತಂಡಕ್ಕೆ ರಾಹುಲ್ ದ್ರಾವಿಡ್ ಬಂದಿದ್ದಾರೆ. ನಾನು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ. ಭಾರತೀಯ ಕ್ರಿಕೆಟ್‌ನ ದಂತಕಥೆ ಜೊತೆ ಕೆಲಸ ಮಾಡಲು ಬಹಳ ಉತ್ಸುಕನಾಗಿದ್ದೇನೆ.
ದ್ರಾವಿಡ್ ಅವರ ಆಟವನ್ನು ನಾನು ಚಿಕ್ಕನಿಂದಲೇ ನೋಡಿ ಬೆಳೆದಿದ್ದೇನೆ. ಅವರ ಬ್ಯಾಟಿಂಗ್ ನನಗೆ ಬಹಳ ಇಷ್ಟ. ಅವರು ನಮ್ಮ ರಾಜ್ಯದವರಾಗಿದ್ದು ತವರಿನ ಫೀಲ್ ನೀಡುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ಇನ್ನು ರೋಹಿತ್ ಶರ್ಮಾ ಉತ್ತಮ ನಾಯಕ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈಗಾಗಲೇ ಅವರ ನಾಯಕತ್ವದಿಂದ ಮುಂಬೈ ಇಂಡಿಯನ್ಸ್ ತಂಡವನ್ನು ಚಾಂಪಿಯನ್ ಮಾಡಿದ್ದಾರೆ. ಅವರ ನಾಯಕತ್ವದ ಬಗ್ಗೆ ಅಂಕಿಅಂಶಗಳೇ ಹೇಳುತ್ತವೆ ಎಂದು ಕೊಂಡಾಡಿದರು.