ಮೈಸೂರು:ಚುಟುಕು ಕ್ರಿಕೆಟ್ನಲ್ಲಿ ಯಾವ ಆಟಗಾರ ಯಾವಾಗ ಅಬ್ಬರಿಸಿ ಬೊಬ್ಬರಿಯುತ್ತಾನೆಂಬುದು ಗೊತ್ತಾಗುವುದಿಲ್ಲ. ಸದ್ಯ ಕರ್ನಾಟಕದಲ್ಲಿ ನಡೆಯುತ್ತಿರುವ ಮಹಾರಾಜ ಟಿ20 ಲೀಗ್‌ನಲ್ಲಿ ಆಟಗಾರನೋರ್ವ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (KSCA) ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಲ್ಬರ್ಗ ತಂಡದ ಆರಂಭಿಕ ಬ್ಯಾಟರ್ ರೋಹನ್ ಪಾಟೀಲ್ ತಾವು ಎದುರಿಸಿದ 47 ಎಸೆತಗಳಲ್ಲಿ ದಾಖಲೆಯ 112ರನ್ಗಳಿಸಿದ್ದಾರೆ. ಇವರು 18 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ಗಳ ಮೂಲಕವೇ 86ರನ್ಗಳಿಸಿದ್ದಾರೆ.
ಗುಲ್ಬರ್ಗಾ ಮಿಸ್ಟಿಕ್ಸ್ ಹಾಗೂ ಮೈಸೂರು ವಾರಿಯರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಈ ದಾಖಲೆ ಮೂಡಿ ಬಂದಿದೆ. 20ರ ಬ್ಯಾಟರ್ ರೋಹನ್ ಪಾಟೀಲ್ ಮೈಸೂರು ತಂಡದ ಬೌಲರ್ಗಳನ್ನು ಹಿಗ್ಗಾಮುಗ್ಗಾ ದಂಡಿಸಿ ಕೇವಲ 42 ಎಸೆತಗಳಲ್ಲಿ ಬಿರುಸಿನ ಶತಕ ಬಾರಿಸಿದರು.
ಇದನ್ನೂ ಓದಿ:ಮಹಾರಾಜ ಕ್ರಿಕೆಟ್ ಟ್ರೋಫಿ: ಟೈಗರ್ಸ್ ವಿರುದ್ಧ ಗುಲ್ಬರ್ಗ ಮಿಸ್ಟಿಕ್ಸ್‌ಗೆ ಸುಲಭ ಜಯ
ಇವರು ತಾವು ಎದುರಿಸಿದ 47 ಎಸೆತಗಳಲ್ಲಿ 11 ಬೌಂಡರಿ ಹಾಗೂ 7 ಸಿಕ್ಸರ್ ಸಿಡಿಸಿದರು. ಈ ಮೂಲಕ 14.1 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು 162 ರನ್ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಮೈಸೂರು ತಂಡ 19 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 160 ರನ್ಗಳಿಕೆ ಮಾಡಿತ್ತು. ಮೈಸೂರಿನ ಶ್ರೀಕಂಠ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ನಡೆದ ಈ ಪಂದ್ಯದ ವೇಳೆ ಮಳೆ ಸುರಿದ ಕಾರಣ 19 ಓವರ್ಗಳಿಗೆ ಪಂದ್ಯವನ್ನು ಸೀಮಿತಗೊಳಿಸಲಾಗಿತ್ತು.