ಮೊಹಾಲಿ(ಪಂಜಾಬ್): ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲು ಕೆಲ ದಿನಗಳಷ್ಟೇ ಬಾಕಿ. ಹೀಗಿರುವಾಗ ಟೀಂ ಇಂಡಿಯಾ ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟಿ20 ಸರಣಿಯಲ್ಲಿ ಭಾಗಿಯಾಗಲಿದೆ. ಈ ಟೂರ್ನಿಯಲ್ಲಿ ಆಡುವ 11ರ ಬಳಗದಲ್ಲಿ ಅವಕಾಶ ಪಡೆದುಕೊಳ್ಳುವ ಆಟಗಾರರು ಬಹುತೇಕವಾಗಿ ಟಿ20 ವಿಶ್ವಕಪ್ನಲ್ಲೂ ಕಣಕ್ಕಿಳಿಯಲಿದ್ದಾರೆಂಬ ಮಾತು ಕೇಳಿ ಬರಲು ಶುರುವಾಗಿದ್ದು, ಮುಖ್ಯವಾಗಿ ವಿಕೆಟ್ ಕೀಪರ್ ಜವಾಬ್ದಾರಿ ಯಾರ ಹೆಗಲಿಗೆ ಬೀಳಲಿದೆ ಎಂಬುದೀಗ ಕುತೂಹಲ ಮೂಡಿಸಿದೆ.
ಪ್ರಶಸ್ತಿಗೆ ಮುತ್ತಿಕ್ಕುವ ಹುಮ್ಮಸ್ಸಿನಿಂದ ಏಷ್ಯಾಕಪ್ನಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ನಿರಾಸೆ ಅನುಭವಿಸಿದೆ. ಆದರೆ, ಇದೀಗ ಯಾವುದೇ ರೀತಿಯ ತಪ್ಪುಗಳಾಗದಂತೆ ವಿಶ್ವಕಪ್ಗೆ ರೋಹಿತ್ ಪಡೆ ಸಜ್ಜಾಗುತ್ತಿದೆ. ಮುಖ್ಯವಾಗಿ, ಮಧ್ಯಮ ಕ್ರಮಾಂಕ ಹಾಗೂ ಬೌಲಿಂಗ್ ವಿಭಾಗದಲ್ಲಿ ಸುಧಾರಣೆ ಆಗಬೇಕಾಗಿದ್ದು ಕೆಲ ಆಟಗಾರರ ಮೇಲಿನ ಜವಾಬ್ದಾರಿಯೂ ಹೆಚ್ಚಾಗಿದೆ.
ರೋಹಿತ್ ಶರ್ಮಾ ಜೊತೆ ಆರಂಭಿಕರಾಗಿ ಕೆ.ಎಲ್.ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದ್ದು, ವಿರಾಟ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ. ಇನ್ನುಳಿದಂತೆ ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಧಾರವಾಗಲಿದ್ದಾರೆ.
ರಿಷಭ್ ಪಂತ್ vs ದಿನೇಶ್ ಕಾರ್ತಿಕ್: ವಿಶ್ವಕಪ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಿಷಭ್ ಅಥವಾ ದಿನೇಶ್ ಕಾರ್ತಿಕ್ಗೆ ಮಣೆ ಹಾಕುವ ಬಗ್ಗೆ ಗೊಂದಲವಿದೆ. ಅನುಭವಿ ಆಟಗಾರ ದಿನೇಶ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಪಂತ್ ದೊಡ್ಡ ಹೊಡೆತಗಳಿಗೆ ಹೆಸರುವಾಸಿಯಾಗಿದ್ದು, ಒಬ್ಬರಿಗೆ ಮಾತ್ರ ಅವಕಾಶ ಸಿಗಲಿದೆ. ಏಷ್ಯಾ ಕಪ್ನ ಪಾಕ್ ವಿರುದ್ಧದ ಪಂದ್ಯದಲ್ಲಿ ದಿನೇಶ್ಗೆ ಅವಕಾಶ ನೀಡಲಾಗಿತ್ತು. ತದನಂತರ ಸೂಪರ್ 4 ಹಂತದಲ್ಲಿ ಪಂತ್ ಆಡಿದ್ದ ಮೂರು ಪಂದ್ಯಗಳಿಂದ ಕೇವಲ 51 ರನ್ಗಳಿಸಿ, ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ದಿನೇಶ್ ಕಾರ್ತಿಕ್ ಯಾವ ಕ್ರಮಾಂಕದಲ್ಲೂ ಬೇಕಾದ್ರೂ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.