ಕೇಪ್ ಟೌನ್:ಭಾರತದ ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ ದ.ಆಫ್ರಿಕಾ ವಿರುದ್ಧದ ಸರಣಿಯನ್ನು ನಿರ್ಧರಿಸುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಏಕಾಂಗಿ ಹೋರಾಟ ನಡೆಸಿದ್ದಲ್ಲದೆ, ಆಕರ್ಷಕ ಶತಕ ಸಿಡಿಸಿ ಭಾರತ ತಂಡ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
ಭಾರತೀಯ ಬ್ಯಾಟರ್ಗಳು ದಕ್ಷಿಣ ಆಫ್ರಿಕಾ ವೇಗಿಗಳ ದಾಳಿಗೆ ತತ್ತರಿಸಿ ವಿಕೆಟ್ ಒಪ್ಪಿಸುತ್ತಿದ್ದರೆ, ಮತ್ತೊಂದೆಡೆ ರೋಷಾವೇಶದಿಂದ ಬ್ಯಾಟಿಂಗ್ ಮಾಡಿದ ಪಂತ್ 133 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್ ನೆರವಿನಿಂದ ವೃತ್ತಿಜೀವನದ 4ನೇ ಶತಕ ಬಾರಿಸಿದರು. ಇವರು ದಾಖಲಿಸಿದ 4 ಶತಕಗಳ ಪೈಕಿ 3 ಶತಕಗಳು ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನೆಲದಲ್ಲಿ ಬಂದಿರುವುದು ವಿಶೇಷವಾಗಿದೆ.