ಹೈದರಾಬಾದ್: ಅಂದು ಡಿಸೆಂಬರ್ 30, 2022 ಭಾರತ ತಂಡದ ಯುವ ಕ್ರಿಕೆಟರ್ ರಿಷಭ್ ಪಂತ್ ಕಾರು ಅಪಘಾತಕ್ಕೀಡಾಗಿದ್ದರು. ಕ್ರಿಕೆಟಿಗ ಗಂಭೀರ ಗಾಯಕ್ಕೆ ತುತ್ತಾಗಿದ್ದರು. ಅವರ ಕಾರು ಅಪಘಾತದ ಸ್ಥಳದಲ್ಲೆ ಬೆಂಕಿಗೆ ಆಹುತಿ ಆಗಿತ್ತು. ಅಪಘಾತದ ತೀವ್ರತೆಯಲ್ಲಿ ರಿಷಭ್ ಪಂತ್ ಅವರ ಕಾಲು ಮತ್ತು ಹಣೆಗೆ ಗಾಯವಾಗಿತ್ತು. 18 ದಿನ ಕಳೆದರೆ ಈ ಘಟನೆಗೆ ಒಂದು ವರ್ಷ ಆಗುತ್ತದೆ.
ಅಪಘಾತಕ್ಕೊಳಗಾದ ವಿಕೆಟ್ ಕೀಪರ್ ರಿಷಭ್ ಪಂತ್ ವರ್ಷದ ನಂತರ ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಎಂಬ ಸಿಹಿ ಸುದ್ದಿ ಹರಿದಾಡುತ್ತಿದೆ. ಪಂತ್ 2024ರ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೇಳೆಗೆ ಮೈದಾನಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಈ ವರ್ಷ ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ರಿಷಭ್ ಪಂತ್ ಅವರ ನಾಯಕತ್ವದಲ್ಲಿ ಆಡಲಿದೆ ಎಂದು ವರದಿಯಾಗಿದೆ.
ಇತ್ತೀಚೆಗೆ ರಿಷಭ್ ಪಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಜಿಮ್ನಲ್ಲಿ ವರ್ಕೌಟ್ ಮಾಡುವ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದು ಸಂಪೂರ್ಣ ಚೇತರಿಸಿಕೊಂಡಂತೆ ಕಂಡು ಬರುತ್ತಿದೆ. ಮುಂದಿನ ವರ್ಷ ಮಾರ್ಚ್ 23 ರಿಂದ ಮೇ 29ರ ವರೆಗೆ ಐಪಿಎಲ್ ನಡೆಯಲಿದೆ. ಇನ್ನು ಮೂರು ತಿಂಗಳು ಬಾಕಿ ಇದ್ದು ಅಷ್ಟರೊಳಗೆ ಮೈದಾನಕ್ಕೆ ಇಳಿಯುವ ನಿರೀಕ್ಷೆ ಇದೆ.
ಡಿ. 19 ರಂದು ಬಿಡ್ ವೇಳೆ ಮಾಹಿತಿ: ಡಿಸೆಂಬರ್ 19 ರಂದು ದುಬೈನಲ್ಲಿ 2024ರ ಐಪಿಎಲ್ ಮಿನಿ ಹರಾಜು ನಡೆಯಲಿದೆ. ಈ ವೇಳೆ ನಾಯಕ ಯಾರೆಂದು ತಿಳಿದು ಬರಲಿದೆ ಎನ್ನಲಾಗಿದೆ. ಅಲ್ಲದೇ, ಇತ್ತಿಚೆಗೆ ಕೋಲ್ಕತ್ತಾದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರದಲ್ಲಿ ಪಂತ್ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರು ಕೋಚಿಂಗ್ ಸಿಬ್ಬಂದಿ ರಿಕಿ ಪಾಂಟಿಂಗ್, ಸೌರವ್ ಗಂಗೂಲಿ ಮತ್ತು ಪ್ರವೀಣ್ ಆಮ್ರೆ ಅವರೊಂದಿಗೆ ಸಮಾಲೋಚಿಸಿದ್ದಾರೆ ಎನ್ನಲಾಗಿದೆ.
ಟಿ20 ವಿಶ್ವಕಪ್ ಆಡ್ತಾರಾ ಪಂತ್:ಐಪಿಎಲ್ನಲ್ಲಿ ಪಂತ್ ಆಡುತ್ತಾರೆ ಎಂದಾದರೆ ವಿಶ್ವಕಪ್ನಲ್ಲೂ ಆಡುವ ನಿರೀಕ್ಷೆ ಇದೆ. ಮೇ ಅಂತ್ಯಕ್ಕೆ ಐಪಿಎಲ್ ಮುಕ್ತಾಯವಾದರೆ, ಜೂನ್ನಲ್ಲಿ ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ಟಿ20 ವಿಶ್ವಕಪ್ ನಡೆಯಲಿದೆ. ಇದಕ್ಕೆ ಒಂದು ವರ್ಷಕ್ಕೂ ಹೆಚ್ಚಿನ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಇದ್ದ ಪಂತ್ ಅವರನ್ನು ಆಯ್ಕೆದಾರರು ಐಪಿಎಲ್ ಆಧಾರದಲ್ಲಿ ತೆಗೆದುಕೊಳ್ಳುತ್ತಾರಾ ಎಂಬುದು ಪ್ರಶ್ನೆಯಾಗಿದೆ. ವಿಕೆಟ್ ಕೀಪರ್ ಸ್ಥಾನಕ್ಕೆ ಇಶಾನ್ ಕಿಶನ್ ಮತ್ತು ಜಿತೇಶ್ ಶರ್ಮಾ ಪ್ರಸ್ತುತ ಪಂತ್ಗೆ ಪ್ರತಿಸ್ಪರ್ಧಿಗಳಾಗಿದ್ದಾರೆ.
ಕಾರು ಅಪಘಾತದಿಂದ ಗಾಯಗೊಂಡ ರಿಷಬ್ ಪಂತ್ 2023ರಲ್ಲಿ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು ಏಕದಿನ ವಿಶ್ವಕಪ್ನಲ್ಲಿ ಭಾಗವಹಿಸುವ ಅವಕಾಶವನ್ನು ಕಳೆದುಕೊಂಡರು.
ಇದನ್ನೂ ಓದಿ:ಈ ಬಾರಿ ಗೂಗಲ್ನಲ್ಲಿ ಹೆಚ್ಚು ಸರ್ಚ್ ಆದ ಕ್ರಿಕೆಟಿಗ ಶುಭ್ಮನ್ ಗಿಲ್