ಬೆಂಗಳೂರು:ಕಳೆದ ವರ್ಷ ಡಿಸೆಂಬರ್ 30ರಂದು ಭೀಕರ ಕಾರು ಅಪಘಾತದಲ್ಲಿ ಗಂಭೀರ ಗಾಯಕ್ಕೆ ತುತ್ತಾದ ವಿಕೆಟ್ ಕೀಪರ್ ರಿಷಬ್ ಪಂತ್ ಆದಷ್ಟು ಬೇಗ ಭಾರತ ಕ್ರಿಕೆಟ್ ತಂಡ ಸೇರಿಕೊಳ್ಳುವ ನಿರೀಕ್ಷೆ ಮೂಡಿಸಿದ್ದಾರೆ. ಅಪಘಾತದ ನಂತರ ಪಂತ್ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯಂದು ಬ್ಯಾಟ್ ಹಿಡಿದು ಮೈದಾನಕ್ಕಿಳಿದಿದ್ದರು. ಶಸ್ತ್ರಚಿಕಿತ್ಸೆಯ ಬಳಿಕ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಚೇತರಿಸಿಕೊಳ್ಳುತ್ತಿರುವ ಅವರು ಬಳ್ಳಾರಿಯ ವಿಜಯನಗರದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಕಂಡುಬಂದರು.
ಇಂದು ಎಕ್ಸ್ ಆ್ಯಪ್ನಲ್ಲಿ, ಪಂತ್ ಮೈದಾನಕ್ಕಿಳಿದು ಆಡಿರುವ ವಿಡಿಯೋ ವೈರಲ್ ಆಗಿದೆ. ಇದು ರಿಷಬ್ ಪಂತ್ ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ರಾಯಭಾರಿಯಾಗಿರುವ ಕಾರಣ ಜಾಹೀರಾತು ಶೂಟಿಂಗ್‌ಗಾಗಿ ಬಳ್ಳಾರಿಗೆ ಬಂದಿದ್ದರು ಎನ್ನಲಾಗಿದೆ. ತೋರಣಗಲ್ಲಿನ ಜಿಂದಾಲ್ ಘಟಕದಲ್ಲಿ ಪಂತ್ ಬ್ಯಾಟ್ ಬೀಸಿದ್ದಾರೆ. ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಪಂತ್ ಆಟದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ತುಣುಕಿನಲ್ಲಿ ಪಂತ್ ಲಾಂಗ್ ಆಫ್ ಕಡೆಗೆ ಶಾಟ್ ಹೊಡೆದಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ನೆರೆದಿದ್ದ ಪ್ರೇಕ್ಷಕರು ಹರ್ಷೋದ್ಗರಿಸಿ ಚಪ್ಪಾಳೆ ತಟ್ಟಿದ್ದಾರೆ.
ಜುಲೈ 21ರಂದು ಬಿಸಿಸಿಐ, ಪಂತ್ ಕೀಪಿಂಗ್ ಅಭ್ಯಾಸ ಮಾಡುತ್ತಿದ್ದಾರೆ ಎಂದು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿತ್ತು. ಈಗ ಅವರು ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುತ್ತಿದ್ದಾರೆ. ರಿಷಬ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅಲ್ಲದೇ, ಎನ್ಸಿಎಯಲ್ಲಿ ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಕಠಿಣ ಪರಿಶ್ರಮ ಪಡುತ್ತಿದ್ದಾರೆ.