ನವದೆಹಲಿ:ಕಳೆದ ವರ್ಷ ಭೀಕರ ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ರಿಷಭ್ ಪಂತ್ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಆರೋಗ್ಯದ ಬಗ್ಗೆ ಕ್ರಿಕೆಟರ್ ಅಪ್‌ಡೇಟ್ ಮಾಡಿದ್ದಾರೆ. ಊರುಗೋಲು ಇಲ್ಲದೆ ನಡೆಯುವ ವಿಡಿಯೋವನ್ನು ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ರಿಷಭ್ ಪಂತ್ ಪೋಸ್ಟ್ ಮಾಡಿದ್ದಾರೆ.
ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾದ ಕಿರು ವಿಡಿಯೋದಲ್ಲಿ, ಪಂತ್ ಅವರು ಪ್ರಸ್ತುತ ಪುನರ್ವಸತಿಯಲ್ಲಿರುವ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ತಮ್ಮ ಊರುಗೋಲನ್ನು ಎಸೆಯುವುದನ್ನು ಮತ್ತು ಬೇರೆ ಯಾವುದೇ ಬೆಂಬಲವಿಲ್ಲದೆ ತಮ್ಮ ಕಾಲುಗಳ ಮೇಲೆ ನಡೆಯುವುದನ್ನು ಕಾಣಬಹುದು. "ಹ್ಯಾಪಿ ನೋ ಮೋರ್ ಕ್ರಚಸ್ (ಊರುಗೋಲು) ಡೇ!" ಎಂಬ ಶೀರ್ಷಿಕೆಯಲ್ಲಿ ಪಂತ್ ವಿಡಿಯೋ ಹಂಚಿಕೊಂಡಿದ್ದಾರೆ.
ಸೀಮ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಎಮೋಜಿಗಳನ್ನು ಪೋಸ್ಟ್ ಮಾಡುವ ಮೂಲಕ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಸೂರ್ಯ ಕುಮಾರ್ ಯಾದವ್, "ಸ್ಪೈಡೆ ಮರಳಿದ್ದಾರೆ! ಹೆಚ್ಚಿನ ಶಕ್ತಿಯೊಂದಿಗೆ" ಎಂದು ಬರೆದಿದ್ದಾರೆ. ಸ್ಪಿನ್ ಆಲ್‌ರೌಂಡರ್ ಕೃನಾಲ್ ಪಾಂಡ್ಯ "ಹೌದು ಬ್ರೋ" ಎಂದು ಬರೆದರೆ, ಕುಲದೀಪ್ ಯಾದವ್ ಎರಡು ಹೃದಯ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಭಾರತದ ಮಾಜಿ ಬೌಲರ್ ಶ್ರೀಶಾಂತ್ "ಲವ್ ಯು ಬ್ರದರ್ ನಂಬಿಕೆಯನ್ನು ಹೀಗೇ ಮುಂದುವರೆಸು" ಎಂದು ಬರೆದಿದ್ದಾರೆ.
ಕಳೆದ ವರ್ಷ ಡಿಸೆಂಬರ್ 30 ರಂದು ಬೆಳಗ್ಗೆ, 25 ವರ್ಷದ ಪಂತ್ ತನ್ನ ತವರು ರೂರ್ಕಿಗೆ ತೆರಳುತ್ತಿದ್ದಾಗ ದೆಹಲಿ-ಡೆಹ್ರಾಡೂನ್ ಹೆದ್ದಾರಿಯಲ್ಲಿ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಅವಘಡ ಸಂಭವಿಸಿತ್ತು. ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಳೌರ್ ಮತ್ತು ನರ್ಸನ್ ನಡುವೆ ಭೀಕರ ಕಾರು ಅಪಘಾತ ಸಂಭವಿಸಿತ್ತು.