ಸೆಂಚುರಿಯನ್: ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿಕೆಟ್ ಕೀಪರ್ ರಿಷಭ್ ಪಂತ್ ವೇಗವಾಗಿ 100 ಬ್ಯಾಟರ್ಗಳನ್ನು ಔಟ್ ಮಾಡಿದ ಭಾರತದ ವಿಕೆಟ್ ಕೀಪರ್ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಈ ಮೂಲಕ ದಿಗ್ಗಜ ಎಂ ಎಸ್ ಧೋನಿ ಹೆಸರಿನಲ್ಲಿದ್ದ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
ಈ ಪಂದ್ಯಕ್ಕೂ ಮುನ್ನ ವಿಕೆಟ್ ಕೀಪರ್ ಆಗಿ 89 ಕ್ಯಾಚ್‌ಗಳು ಹಾಗೂ ಎಂಟು ಸ್ಟಂಪ್ ಔಟ್ ಸೇರಿ 97 ಬಾರಿ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್ಗಟ್ಟಿದ್ದ ರಿಷಭ್ ಪಂತ್‌ಗೆ ಬಾಕ್ಸಿಂಗ್ ಡೇ ಪಂದ್ಯದಲ್ಲಿ 3 ಕ್ಯಾಚ್ ಪಡೆಯುವ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ 100ನೇ ಬಲಿ ಪಡೆದರು. ಅಲ್ಲದೆ ಕೇವಲ 26ನೇ ಟೆಸ್ಟ್ನಲ್ಲಿ ಈ ವಿಶೇಷ ಮೈಲಿಗಲ್ಲನ್ನು ಸ್ಥಾಪಿಸುವ ಮೂಲಕ ಭಾರತದ ಪರ ಅತಿ ವೇಗವಾಗಿ 100 ಬಲಿ ಪಡೆದ ಭಾರತದ ವಿಕೆಟ್ ಕೀಪರ್ ಎನಿಸಿಕೊಂಡರು.
ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಸ್ಟಂಪ್‌ಗಳ ಹಿಂದೆ 100 ಬಲಿ ಪಡೆಯಲು 36 ಟೆಸ್ಟ್ ಪಂದ್ಯಗಳನ್ನು ತೆಗೆದುಕೊಂಡಿದ್ದರು. ಇದೀಗ ಪಂತ್ 26 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.