ಕರ್ನಾಟಕ

karnataka

ಐಪಿಎಲ್​ ಕ್ರಿಕೆಟ್​ಗೆ ಮರಳುವೆ: ಜಾಹೀರಾತು ವಿಡಿಯೋದಲ್ಲಿ ರಿಷಬ್​ ಪಂತ್​ ಹೇಳಿಕೆ

ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ರಿಷಬ್​ ಪಂತ್​ ಕ್ರಿಕೆಟ್​ಗೆ ಮರಳುವುದಾಗಿ ಹೇಳಿದ್ದಾರೆ. ಜೊಮ್ಯಾಟೊ ಜಾಹೀರಾತಿನ ವಿಡಿಯೋ ನೋಡಿ.

By

Published : Mar 30, 2023, 11:12 AM IST

Published : Mar 30, 2023, 11:12 AM IST

ಜೊಮ್ಯಾಟೊ ವಿಡಿಯೋದಲ್ಲಿ ರಿಷಬ್​ ಪಂತ್​ ಹೇಳಿಕೆ
ಜೊಮ್ಯಾಟೊ ವಿಡಿಯೋದಲ್ಲಿ ರಿಷಬ್​ ಪಂತ್​ ಹೇಳಿಕೆ

ನವದೆಹಲಿ:ಕ್ರಿಕೆಟ್​ಗೆ ವಾಪಸ್​ ಆಗುತ್ತೇನೆ. ಕ್ರಿಕೆಟ್​ ಇಲ್ಲದೇ ನಾನಿರಲ್ಲ ಎಂದು ಸ್ಫೋಟಕ ಆಟಗಾರ ರಿಷಬ್​ ಪಂತ್ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಹಾಗಿದ್ದರೆ, ಪಂತ್​ ಐಪಿಎಲ್​ನಲ್ಲಿ ಭಾಗವಹಿಸುತ್ತಾರಾ ಎಂಬುದು ಅಭಿಮಾನಿಗಳಲ್ಲಿ ಮೂಡಿದ ಪ್ರಶ್ನೆ.

ವಿಡಿಯೋದಲ್ಲೇನಿದೆ?:ಭಾರತ ತಂಡದ ಹೊಡಿಬಡಿ ಕ್ರಿಕೆಟಿಗ ರಿಷಬ್​ ಪಂತ್​ ಕಳೆದ ವರ್ಷಾಂತ್ಯದಲ್ಲಿ ಕಾರು ಅಪಘಾತಕ್ಕೀಡಾಗಿ, ತೀವ್ರ ಗಾಯಕ್ಕೆ ತುತ್ತಾಗಿದ್ದರು. ಅಂದಿನಿಂದ ಚಿಕಿತ್ಸೆ ಪಡೆಯುತ್ತಿರುವ ಕ್ರಿಕೆಟಿಗ ತಿಂಗಳುಗಳ ಕಾಲ ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ. ವೈದ್ಯರ ನಿಗಾದಲ್ಲಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ದೀರ್ಘ ಸಮಯದ ಬಳಿಕ ಆಹಾರ ವಿತರಕ ಸಂಸ್ಥೆಯಾದ ಜೊಮ್ಯಾಟೊ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಪಂತ್​ ಆಹಾರ ಮತ್ತು ಕ್ರಿಕೆಟ್ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅವರು ಮತ್ತೆ ಕ್ರಿಕೆಟ್​ಗೆ ಮರಳುವುದಾಗಿ ಹೇಳಿದ್ದಾರೆ.

"ಕ್ರಿಕೆಟ್ ಮತ್ತು ಆಹಾರ ಇದೆರಡು ಇಲ್ಲದೆ ಬದುಕಲು ಸಾಧ್ಯವಿಲ್ಲ. ಕಳೆದ ಕೆಲವು ತಿಂಗಳುಗಳಿಂದ ನಾನು ಕ್ರಿಕೆಟ್ ಆಡಲು ಸಾಧ್ಯವಾಗಲಿಲ್ಲ. ಆದರೆ, ವೈದ್ಯರು ನನಗೆ ಸರಿಯಾಗಿ ತಿನ್ನಲು ಸಲಹೆ ನೀಡಿದರು. ಹಾಗಾಗಿ ಸಾಕಷ್ಟು ಆರೋಗ್ಯಕರವಾದ ಆಹಾರವನ್ನು ತಿನ್ನುತ್ತಿದ್ದೇನೆ. ಕ್ರಿಕೆಟ್ ಸೀಸನ್ ಶುರುವಾಗ್ತಿದೆ. ಆಗ ನನಗೆ ಅನ್ನಿಸಿತು. ಎಲ್ಲರೂ ಕ್ರಿಕೆಟ್​​ ಆಡುತ್ತಿದ್ದಾರೆ, ನಾನೇಕೆ ಆಡಬಾರದು? ನಾನು ಇನ್ನೂ ಆಟವನ್ನು ಮರೆತಿಲ್ಲ. ಶೀಘ್ರವೇ ಆಡಲು ಬರುತ್ತಿದ್ದೇನೆ" ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ.

ಅಂದರೆ, ಕ್ರಿಕೆಟ್​ ಹಬ್ಬವಾದ ಐಪಿಎಲ್​ನ ಹಿನ್ನೆಲೆಯಲ್ಲಿ ಮನೆಯಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸುವಾಗ ಜೊಮ್ಯಾಟೋದಲ್ಲಿ ಆಹಾರ ಆರ್ಡರ್​ ಮಾಡಿ ತಿನ್ನಿ ಎಂಬರ್ಥದ ಸಂದೇಶವುಳ್ಳ ಜಾಹೀರಾತು ಮಾಡಿದೆ. ಪಂತ್​ ಕ್ರಿಕೆಟ್​ನಿಂದ ದೂರವುಳಿದ ಕಾರಣ ಅದನ್ನೇ ಜಾಹೀರಾತಿನ ಥೀಮ್​ ಆಗಿ ಬಳಸಿಕೊಂಡಿದೆ. ಪಂತ್ ಕ್ರಿಕೆಟ್​ಗೆ ಮರಳುವಂತೆ ಆಹಾರವನ್ನು ನಿಮ್ಮ ಮನೆಗೆ ತರಿಸಿಕೊಳ್ಳಿ ಎಂದು ಜೊಮ್ಯಾಟೊ ಸಂಸ್ಥೆ ಹೇಳಿಕೊಂಡಿದೆ.

ಗಾಯದಿಂದ ಫೂರ್ಣವಾಗಿ ಚೇತರಿಸಿಕೊಳ್ಳಬೇಕಿರುವ ಕಾರಣ ರಿಷಬ್​ ಪಂತ್​ ಇನ್ನಷ್ಟು ದಿನ ಕ್ರಿಕೆಟ್​ಗೆ ಮರಳಲು ಸಾಧ್ಯವಿಲ್ಲ. ಪಂತ್​ ಬದಲಾಗಿ ಅಭಿಷೇಕ್ ಪೊರೆಲ್ ಅವರು ದೆಹಲಿ ಕ್ಯಾಪಿಟಲ್ಸ್ ತಂಡ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಅಪಘಾತದ ಕಹಿನೆನಪು:2022 ರ ಡಿಸೆಂಬರ್​ 31 ರಂದು ಬೆಳಗಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ರಿಷಬ್ ಪಂತ್ ಇದ್ದ ಮರ್ಸಿಡಿಸ್ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿತ್ತು. ಕುಟುಂಬ ವಾಸವಿರುವ ರೂರ್ಕಿಗೆ ಹೋಗುತ್ತಿದ್ದಾಗ ದೆಹಲಿ- ಡೆಹ್ರಾಡೂನ್ ಹೆದ್ದಾರಿಯಲ್ಲಿ ಈ ಅಪಘಾತ ನಡೆದಿತ್ತು. ಅದೃಷ್ಟವಶಾತ್​ ಬದುಕುಳಿದ ಪಂತ್​ ಬಸ್​ ಚಾಲಕ ಮತ್ತು ನಿರ್ವಾಹಕರ ಸಹಾಯದಿಂದ ಆಸ್ಪತ್ರೆ ಸೇರಿದ್ದರು. ಇತ್ತೀಚೆಗೆ ಅವರು ನೀರಿನಲ್ಲಿ ವಾಕ್​ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು.

ಪಂತ್​ ಅನುಪಸ್ಥಿತಿಯಲ್ಲಿ ಡೇವಿಡ್​ ವಾರ್ನರ್​ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಕೆ.ಎಲ್.ರಾಹುಲ್ ನೇತೃತ್ವದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಶನಿವಾರ ನಡೆಯುವ ಪಂದ್ಯದ ಮೂಲಕ ಇಂಡಿಯನ್ ಪ್ರೀಮಿಯರ್ ಲೀಗ್ 2023 ರ ಅಭಿಯಾನವನ್ನು ಆರಂಭಿಸಲಿದ್ದಾರೆ.

ಇದನ್ನೂ ಓದಿ:ಪಂಜಾಬ್​ ಕಿಂಗ್ಸ್​ ಮೊದಲ ಪಂದ್ಯ ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ: ಶಿಖರ್​ ಧವನ್​ಗೆ ಹೆಚ್ಚಾದ ತಲೆಬಿಸಿ

ABOUT THE AUTHOR

...view details