ಬೆಂಗಳೂರು:ಶ್ರೀಲಂಕಾ ವಿರುದ್ಧ ನಡೆಯುತ್ತಿರುವ 2 ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಕಪಿಲ್ ದೇವ್ ಹೆಸರಿನಲ್ಲಿದ್ದ 40 ವರ್ಷಗಳ ಹಿಂದಿನ ದಾಖಲೆಯನ್ನ ಪುಡಿಗಟ್ಟಿದ್ದಾರೆ.
ಭಾನುವಾರ ರಿಷಭ್ ಪಂತ್ ಭಾರತದ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ 28 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ಗಳೊಂದಿಗೆ 50 ರನ್ ಪೂರೈಸಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ವೇಗದ ಅರ್ಧಶತಕ ಸಿಡಿಸಿದ ಭಾರತದ ಬ್ಯಾಟರ್ ಎನಿಸಿಕೊಂಡರು.
1982ರಲ್ಲಿ ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಪಾಕಿಸ್ತಾನ ವಿರುದ್ಧ 30 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದು ಇಲ್ಲಿಯವರೆಗಿನ ದಾಖಲೆಯಾಗಿತ್ತು. ಕಪಿಲ್ ದೇವ್ ಹೊರೆತು ಪಡಿಸಿದರೆ ಶಾರ್ದೂಲ್ ಠಾಕೂರ್ 31 ಎಸೆತಗಳಲ್ಲಿ ಮತ್ತು ವಿರೇಂದ್ರ ಸೆಹ್ವಾಗ್ 32 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಒಟ್ಟಾರೆ ಟೆಸ್ಟ್ ಕ್ರಿಕೆಟ್ನಲ್ಲಿ ವೇಗದ ಅರ್ಧಶತಕದ ವಿಶ್ವದಾಖಲೆ ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಹೆಸರಿನಲ್ಲಿದೆ. ಅವರು 2014ರಲ್ಲಿ ಆಸ್ಟ್ರೇಲಿಯಾ ವಿರುದ್ಧ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಡೇವಿಡ್ ವಾರ್ನರ್ (23), ಜಾಕ್ ಕಾಲೀಸ್(24), ಶೆಲ್ಲಿಂಗ್ಫೋರ್ಡ್(25) ಅತ್ಯಂತ ಕಡಿಮೆ ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಪಟ್ಟಿಯಲ್ಲಿ ಮಿಸ್ಬಾ ನಂತರದ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ:ಫ್ರಾಂಚೈಸಿ ನನ್ನ ಮೇಲೆ ನಂಬಿಕೆಯಟ್ಟರೆ ಐಪಿಎಲ್ನಲ್ಲೂ ರನ್ ಮಳೆ ಸುರಿಸುವೆ: ಸರ್ಫರಾಜ್ ಖಾನ್