ನವದೆಹಲಿ:ಯುವ ಕ್ರಿಕೆಟಿಗ ರಿಷಬ್ ಪಂತ್ ತನ್ನ ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲು ಮನೆಗೆ ಹೊರಟಿದ್ದಾಗ ಕಾರು ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿದ್ದಾರೆ. ಬೆನ್ನು, ತಲೆ, ಪಾದಕ್ಕೆ ಗಾಯವಾಗಿದೆ. ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಅವರನ್ನು ದೆಹಲಿಗೆ ಏರ್ಲಿಫ್ಟ್ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ರಿಷಬ್ ಪಂತ್ ದೆಹಲಿಯಿಂದ ತಮ್ಮ ನಿವಾಸವಿರುವ ಉತ್ತರಾಖಂಡದ ರೂರ್ಕಿಗೆ ತೆರಳುತ್ತಿದ್ದರು. ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಬೆಳಗಿನ ಜಾವದ ವೇಳೆ ಹೋಗುತ್ತಿದ್ದಾಗ 5.20 ರ ಸುಮಾರಿನಲ್ಲಿ ಡಿವೈಡರ್ಗೆ ಗುದ್ದಿ ಭೀಕರ ಅಪಘಾತಕ್ಕೀಡಾಗಿದ್ದಾರೆ. ಕಾರಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿದೆ. ಕಾರಿನ ಗಾಜು ಹೊಡೆದು ಹೊರಬಿದ್ದ ಪಂತ್ ಜೀವ ಉಳಿಸಿಕೊಂಡಿದ್ದಾರೆ.
ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್ ಅಪಘಾತವನ್ನು ಗಮನಿಸಿ ಅದರ ಚಾಲಕ ಮತ್ತು ಪ್ರಯಾಣಿಕರು ನೆರವಿಗೆ ಧಾವಿಸಿದ್ದಾರೆ. ಆಂಬ್ಯುಲೆನ್ಸ್ಗೆ ಕರೆ ಮಾಡಿ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಯುವ ಕ್ರಿಕೆಟಿಗನಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಉತ್ತಮ ಚಿಕಿತ್ಸೆಗಾಗಿ ದೆಹಲಿಗೆ ಏರ್ಲಿಫ್ಟ್:ಅಪಘಾತದಲ್ಲಿ ಪಂತ್ ಬೆನ್ನು, ತಲೆ ಮತ್ತು ಪಾದಕ್ಕೆ ಗಾಯಗಳಾಗಿವೆ. ವೈದ್ಯರ ತಂಡ ಮೇಲ್ವಿಚಾರಣೆ ನಡೆಸುತ್ತಿದೆ. ಪ್ಲಾಸ್ಟಿಕ್ ಸರ್ಜರಿ ಅಗತ್ಯವಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕ್ರಿಕೆಟಿಗನನ್ನು ದೆಹಲಿಗೆ ವಿಮಾನದ ಮೂಲಕ ಕರೆದೊಯ್ಯುವ ಬಗ್ಗೆ ಚಿಂತನೆ ನಡೆದಿದೆ ಎಂದು ವೈದ್ಯರು ತಿಳಿಸಿದ್ದಾರೆ.