ನವದೆಹಲಿ: ಉತ್ತರ ಪ್ರದೇಶ ಮೂಲದ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಬ್ಯಾಟರ್ ರಿಂಕು ಸಿಂಗ್ 2023ರ ಏಷ್ಯನ್ ಗೇಮ್ಸ್ನಲ್ಲಿ ಆಡಲಿರುವ ತಂಡಕ್ಕೆ ಆಯ್ಕೆ ಆಗಿದ್ದಾರೆ. ಸದ್ಯ ಅಭ್ಯಾಸದಲ್ಲಿ ತೊಡಗಿಸಿಕೊಂಡಿರುವ ರಿಂಕು ತಂಡಕ್ಕೆ ಆಯ್ಕೆ ಆದ ಸುದ್ದಿ ತಿಳಿದಾಗ ಕುಟುಂಬಸ್ಥರು ಮತ್ತು ಸ್ನೇಹಿತರು ಸಂಭ್ರಮಿಸಿದ ಕ್ಷಣದ ಬಗ್ಗೆ ನೆನೆದಿದ್ದಾರೆ. ಏಷ್ಯಾಕಪ್ ಮತ್ತು ವಿಶ್ವಕಪ್ ನಡುವೆ ನಡೆಯುವ ಏಷ್ಯನ್ ಗೇಮ್ಸ್ ನಡೆಯಲಿದ್ದು, ಇದೇ ಮೊದಲ ಬಾರಿಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತಂಡವನ್ನು ಕಳಿಸುತ್ತಿದೆ.
ಏಷ್ಯನ್ ಗೇಮ್ಸ್‌ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸುದ್ದಿ ಕೇಳಿದ ನಂತರ ತಮ್ಮ ಮನೆಯಲ್ಲಿ ಎಲ್ಲರೂ ಸಂತೋಷಪಟ್ಟಿದ್ದಾರೆ ಎಂಬ ಮಾಹಿತಿಯನ್ನು ರಿಂಕು ಸಿಂಗ್ ಬಹಿರಂಗಪಡಿಸಿದ್ದಾರೆ. ದೇಶೀಯ ಕ್ರಿಕೆಟ್‌ನಲ್ಲಿ ಹಲವಾರು ಸೀಸನ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಮತ್ತು ಐಪಿಎಲ್ 2023 ರ ಋತುವಿನಲ್ಲಿ ಅವರು ಕೆಕೆಆರ್‌ಗಾಗಿ 14 ಪಂದ್ಯಗಳಲ್ಲಿ 474 ರನ್ ಗಳಿಸಿದ ಅದ್ಭುತ ಪ್ರದರ್ಶನದ ಹೊರತಾಗಿಯೂ, ಕೆರಿಬಿಯನ್‌ನಲ್ಲಿ ಟಿ 20 ಐ ಸರಣಿಗಾಗಿ ಭಾರತೀಯ ತಂಡದಲ್ಲಿ ರಿಂಕು ಆಯ್ಕೆಯಾಗಲಿಲ್ಲ. ಆದಾಗ್ಯೂ, ಎಡಗೈ ಬ್ಯಾಟರ್ ನಂತರ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿರುವ ಏಷ್ಯನ್ ಗೇಮ್ಸ್ 2023 ಗೆ ಸೆಲೆಕ್ಟ್ ಆಗಿದ್ದಾರೆ.
ಬಿಸಿಸಿಐ ಟಿವಿ ವೆಬ್ ಸೈಟ್ನಲ್ಲಿ ರಿಂಕು ಸಿಂಗ್ ಅವರೊಂದಿಂಗಿನ ಚುಟುಕು ಸಂದರ್ಶನವನ್ನು ಹಾಕಲಾಗಿದೆ. ಇದರಲ್ಲಿ ಮೊದಲು ಅವರು ಐಪಿಎಲ್ ಕಡೆ ಓವರ್‌ನಲ್ಲಿ ಬಾರಿಸಿದ ಸಿಕ್ಸ್ಗಳ ಬಗ್ಗೆ ಹಂಚಿಕೊಂಡಿದ್ದಾರೆ. ನಂತರ ಮಾತನಾಡಿದ ಅವರು "ಮನೆಯಲ್ಲಿ ಎಲ್ಲರೂ ನಾನು ಭಾರತಕ್ಕಾಗಿ ಆಡಬೇಕೆಂದು ಬಯಸಿದ್ದರು ಮತ್ತು ನಾನು ಆಯ್ಕೆಯಾದಾಗ ಎಲ್ಲರೂ ಸಂತೋಷಪಟ್ಟರು. ಸ್ನೇಹಿತರು ಈ ಸುದ್ದಿಯನ್ನು ನನಗೆ ಮೊದಲು ತಿಳಿಸಿದರು" ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
2023ರ ಇಂಡಿಯನ್ ಪ್ರೀಯರ್ ಲೀಗ್ (ಐಪಿಎಲ್)ನಲ್ಲಿ ಗುಜರಾತ್ ಟೈಟಾನ್ಸ್ ವೇಗಿ ಯಶ್ ದಯಾಲ್ ಅವರನ್ನು ಒಂದು ಓವರ್‌ನಲ್ಲಿ ಐದು ಸಿಕ್ಸರ್‌ಗಳಿಗೆ ಹೊಡೆದ ನಂತರ ಅವರ ಜೀವನ ಹೇಗೆ ಬದಲಾಗಿದೆ ಎಂಬುದನ್ನು ವಿಡಿಯೋದಲ್ಲಿ ವಿವರಿಸಿದ್ದಾರೆ. "ಆ ಐದು ಸಿಕ್ಸರ್‌ಗಳ ನಂತರ ಜೀವನವು ಬಹಳಷ್ಟು ಬದಲಾಯಿತು. ಆ ಸಮಯದಲ್ಲಿ ಜನರು ನನ್ನನ್ನು ತಿಳಿದಿದ್ದರು ಆದರೆ ನಾನು ಅಷ್ಟೊಂದು ಜನಪ್ರಿಯನಾಗಿರಲಿಲ್ಲ, ಆ ನಂತರ ಬಹಳಷ್ಟು ಜನರಿಗೆ ನನ್ನ ಬಗ್ಗೆ ತಿಳಿಯಿತು. ಇದೊಂದು ವಿಶೇಷ ಇನ್ನಿಂಗ್ಸ್, ಆ ಇನ್ನಿಂಗ್ಸ್‌ನಿಂದ ಎಲ್ಲರೂ ನನ್ನನ್ನು ಲಾರ್ಡ್ ಎಂದು ಕರೆಯಲು ಪ್ರಾರಂಭಿಸಿದರು" ಎಂದು ಹೇಳಿದ್ದಾರೆ.