ದುಬೈ : ನಡೆಯುತ್ತಿರುವ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. 4 ಅರ್ಧಶತಕ 2 ಶತಕದ ನೆರವಿನಿಂದ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ವಿರಾಟ್ (543) ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ಡಿ ಕಾಕ್ ಅವರಿಂದ ಕೇವಲ 7 ರನ್ ಕಡಿಮೆ ಹೊಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಶತಕ ಗಳಿಸಿದ ನಂತರ ವಿರಾಟ್ ಈ ಸ್ಥಾನಕ್ಕೆ ಏರಿದ್ದಾರೆ.
ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ವಿರಾಟ್ ಕೊಹ್ಲಿ ಭಾನುವಾರ ಸರಿಗಟ್ಟಿದ್ದಾರೆ. ಈ ದಾಖಲೆ ಬರೆದ ವಿರಾಟ್ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ರಿಕಿ ಪಾಂಟಿಂಗ್ ಹೊಗಳಿದ್ದಾರೆ. ಅಲ್ಲದೇ ವಿರಾಟ್ ಈ ವಿಶ್ವಕಪ್ನಲ್ಲಿ ಇನ್ನಷ್ಟು ಹೊಸ ದಾಖಲೆಗಳನ್ನು ಮಾಡಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ವಿರಾಟ್ ತಮ್ಮ 35ನೇ ಹುಟ್ಟುಹಬ್ಬದಂದು ದಕ್ಷಿಣ ಆಫ್ರಿಕಾ ವಿರುದ್ಧದ ಅದ್ಭುತ ಶತಕದೊಂದಿಗೆ, ಕೊಹ್ಲಿ ತೆಂಡೂಲ್ಕರ್ ಅವರ 49 ಏಕದಿನ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 2009ರಲ್ಲಿ ವಿರಾಟ್ ಕೊಹ್ಲಿ ತಮ್ಮ ಚೊಚ್ಚಲ ಏಕದಿನ ಕ್ರಿಕೆಟ್ನ ಶತಕವನ್ನು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲೇ ದಾಖಲಿಸಿದ್ದರು. ಈಗ ಸಚಿನ್ ಅವರ ದಾಖಲೆಯನ್ನು ಅದೇ ಮೈದಾನದಲ್ಲಿ ಸಮಮಾಡಿಕೊಂಡು ಏಕದಿನ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಶತಕಗಳಿಸಿದ ಆಟಗಾರ ಎಂಬ ಖ್ಯಾತಿಗೆ ಒಳಗಾದರು.
ಸಚಿನ್ ದಾಖಲೆಯನ್ನು ಸರಿಗಟ್ಟಿದ ನಂತರ ವಿರಾಟ್ ಒತ್ತಡ ರಹಿತವಾಗಿ ಆಡುತ್ತಾರೆ ಎಂದು ರಿಕಿ ಪಾಂಟಿಂಗ್ ಐಸಿಸಿ ಜೊತೆಗೆ ಮಾತನಾಡುವಾಗ ಹೇಳಿದ್ದಾರೆ. "ಸಚಿನ್ ಶತಕ ಸರಿಟಗಟ್ಟಬೇಕೆಂಬ ಭಾರವನ್ನು ವಿರಾಟ್ ಬೆನ್ನಮೇಲೆ ಹೇರಿದಂತಿತ್ತು. ಆ ದಾಖಲೆ ಮಾಡಿದ ನಂತರ ಚೇಸ್ ಮಾಸ್ಟರ್ ಒತ್ತಡ ರಹಿತವಾಗಿ ಬ್ಯಾಟ್ ಮಾಡುತ್ತಾರೆ. ಸಚಿನ್ ದಾಖಲೆಯನ್ನು ಸರಿಗಟ್ಟಲು ಹೆಚ್ಚಿನ ಶ್ರಮವಹಿಸಿ ವಿರಾಟ್ ಆಡಿದ್ದಾರೆ. ಉತ್ತಮ ಸಮಯದಲ್ಲಿ ಅವರು ಒತ್ತಡವನ್ನು ಕಳೆದುಕೊಂಡಿದ್ದಾರೆ. ಲೀಗ್ನಲ್ಲಿ ಇನ್ನು ಒಂದು ಪಂದ್ಯ ಮಾತ್ರ ಬಾಕಿ ಇದೆ. ಮುಂದಿನ ಮಹತ್ವದ ಪಂದ್ಯಗಳಲ್ಲಿ ಅವರು ಇನ್ನಷ್ಟು ಉತ್ತಮವಾಗಿ ಆಡುತ್ತಾರೆ" ಎಂದು ಪಾಂಟಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ವಿರಾಟ್ ಶ್ರೇಷ್ಠ ಕ್ರಿಕೆಟ್ ಎಂಬುದರಲ್ಲಿ ಸಂದೇಹ ಇಲ್ಲ. ಅವರು ಸಚಿನ್ ದಾಖಲೆ ಸರಿಗಟ್ಟುವುದು, ಮುರಿಯುವುದು ಅಗತ್ಯವಿಲ್ಲ. ಅವರ ಒಟ್ಟಾರೆ ಬ್ಯಾಟಿಂಗ್ ಅಂಕಿ-ಅಂಶವನ್ನು ನೋಡಿದರೆ, ಅವರೊಬ್ಬ ಲೆಜೆಂಡ್ ಕ್ರಿಕೆಟರ್ ಎಂದು ಹೇಳಬಹುದು. 49ನೇ ಏಕದಿನ ಶತಕವನ್ನು ಸಚಿನ್ ಅವರಿಗಿಂತ 175 ಇನ್ನಿಂಗ್ಸ್ ಮೊದಲೇ ಸಾಧಿಸಿದ್ದಾರೆ" ಎಂದು ರಿಕಿ ಹೇಳಿದ್ದಾರೆ.
ಕೊಹ್ಲಿಯ ಅದ್ಭುತ ಶತಕ ಮತ್ತು ಶ್ರೇಯಸ್ ಅಯ್ಯರ್ ಅವರ ಸ್ಫೋಟಕ ಅರ್ಧಶತಕ ಹಾಗೇ ರೋಹಿತ್ ಶರ್ಮಾ, ಶುಭಮನ್ ಗಿಲ್ ಆಕ್ರಮಣಕಾರಿ ಆರಂಭದ ನೆರವಿನಿಂದ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 326/5 ಕಲೆಹಾಕಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತೀಯ ಬೌಲರ್‌ಗಳು ಹರಿಣಗಳ ಮೇಲೆ ಪ್ರಬಲ ದಾಳಿ ನಡೆಸಿದ್ದರಿಂದ 83 ರನ್ಗೆ ಸರ್ವಪತನ ಕಂಡರು. ರವೀಂದ್ರ ಜಡೇಜಾ 33 ರನ್ ಕೊಟ್ಟು 5 ವಿಕೆಟ್ ಕಬಳಿಸಿ ಬವುಮಾ ಪಡೆಯನ್ನು ಕಾಡಿದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: 2 ಸ್ಥಾನಕ್ಕೆ 4 ತಂಡಗಳ ಹೋರಾಟ; ಭಾರತಕ್ಕೆ ಸೆಮಿಫೈನಲ್‌ನಲ್ಲಿ ಪೈಪೋಟಿ ನೀಡುವವರಾರು?