ದುಬೈ: "ವೃತ್ತಿ ಜೀವನದಲ್ಲಿ ಪ್ರತಿಯೊಬ್ಬರೂ ವೈಫಲ್ಯ ಅನುಭವಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರ ಹಳೆಯ ಪ್ರದರ್ಶನವನ್ನು ಸಂಪೂರ್ಣ ಕಡೆಗಣಿಸಲು ಸಾಧ್ಯವಿಲ್ಲ" ಎಂದು ಹೇಳುವ ಮೂಲಕ ಭಾರತದ ವಿಶ್ವಕಪ್ ತಂಡದಲ್ಲಿ ಸೂರ್ಯ ಕುಮಾರ್ ಯಾದವ್ ಇರಲಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗೆ ರಿಕಿ ಪಾಂಟಿಂಗ್ ಹೇಳಿದರು.
ಐಸಿಸಿ ರಿವೀವ್ನ ಇತ್ತೀಚಿನ ಸಂಚಿಕೆಯಲ್ಲಿ ಏಕದಿನ ವಿಶ್ವಕಪ್ನ ಭಾರತ ತಂಡದ ಬಗ್ಗೆ ಚರ್ಚಿಸುವಾಗ, ಸೂರ್ಯ ಕುಮಾರ್ ಯಾದವ್ ತಂಡದಲ್ಲಿ ಮಧ್ಯಮ ಕ್ರಮಾಂಕಕ್ಕೆ ಅಗತ್ಯ ಎಂಬ ಅಭಿಪ್ರಾಯ ಹೊರಹಾಕಿದ್ದಾರೆ. ವೈಟ್-ಬಾಲ್ ಸ್ಟಾರ್ ಸೂರ್ಯಕುಮಾರ್ ಯಾದವ್ ಮತ್ತು ಭಾರತದ ಇತರ ಬ್ಯಾಟಿಂಗ್ ಲೈನ್‌ಅಪ್ ಜವಾಬ್ದಾರಿಯ ಬಗ್ಗೆ ಮಾತನಾಡಿದ್ದಾರೆ.
ಏಕದಿನ ಕ್ರಿಕೆಟ್ನ ಭಾರತ ತಂಡದಲ್ಲಿ ನಾಯಕ ರೋಹಿತ್ ಶರ್ಮಾ, ಉದಯೋನ್ಮುಖ ಓಪನರ್ ಶುಭಮನ್ ಗಿಲ್ ಮತ್ತು ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಇದ್ದಾರೆ. ಆದರೆ, ಈ ವರ್ಷಾಂತ್ಯದ ವೇಳೆಗೆ ನಡೆಯುವ ಏಕದಿನ ವಿಶ್ವಕಪ್ಗೆ ಮಧ್ಯಮ ಕ್ರಮಾಂಕಕ್ಕೆ ಸೂಕ್ತ ಆಟಗಾರರ ಅಗತ್ಯ ಹುಡುಕಾಟ ಇದೆ, ಇಲ್ಲಿನ ಖಾಲಿ ಜಾಗವನ್ನು ತುಂಬುವ ಬಗ್ಗೆ ಪಾಂಟಿಂಗ್ ಕೆಲ ಆಟಗಾರರನ್ನು ಸೂಚಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ ಅವರ ಇತ್ತೀಚಿನ ಏಕದಿನ ಸರಣಿಯ ಸೋಲಿನ ಸಂದರ್ಭದಲ್ಲಿ, ಭಾರತದ ಮಧ್ಯಮ ಕ್ರಮಾಂಕದ ಸಮಸ್ಯೆ ಕಂಡು ಬಂದಿತ್ತು. ಸೂರ್ಯಕುಮಾರ್ ವಿಶೇಷವಾಗಿ ಹೆಣಗಾಡಿದರು. ಮೂರು ಇನ್ನಿಂಗ್ಸ್‌ಗಳಲ್ಲಿ ಗೋಲ್ಡನ್ ಡಕ್ ಆಗುವ ಮೂಲಕ ಟೀಕೆಗೆ ಒಳಗಾಗಿದ್ದರು. ಫೆಬ್ರವರಿ 2022 ರಲ್ಲಿ ಸೂರ್ಯ ಅವರು ಏಕದಿನ ಅರ್ಧಶತಕ ಗಳಿಸಿದ್ದರು. ಏಕದಿನದಲ್ಲಿ ಯಾದವ್ ಅವರು ಕೇವಲ 12.28 ಸರಾಸರಿಯಲ್ಲಿ 172 ರನ್ ಗಳಿಸಿದ್ದಾರೆ. ಆದರೆ ಕೊನೆಯ ಏಕದಿನ ಸರಣಿಯ ವಿಫಲತೆಯ ನಂತರವೂ ಪಾಂಟಿಂಗ್ ವಿಶ್ವಕಪ್ ತಂಡಕ್ಕೆ ಸೂರ್ಯ ಕುಮಾರ್ ಅವರನ್ನು ಸೂಚಿಸಿದ್ದಾರೆ.