ಅಹಮದಾಬಾದ್ (ಗುಜರಾತ್): 2023ರ ವಿಶ್ವಕಪ್ ಚಾಂಪಿಯನ್ ಯಾರೆಂದು ಅರಿಯಲು ಇನ್ನು ಒಂದು ಪಂದ್ಯದ ಫಲಿತಾಂಶ ಮಾತ್ರ ಬಾಕಿ ಇದೆ. ನವೆಂಬರ್ 19ರಂದು ವಿಶ್ವಕಪ್ನ್ನು ಯಾವ ತಂಡದ ಪಾಲಾಗಲಿದೆ ಎಂಬುದು ತಿಳಿಯುತ್ತದೆ. 130,000 ಜನ ಪ್ರೇಕ್ಷಕರ ಸಾಮರ್ಥ್ಯ ಇರುವ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣ ಅಂತಿಮ ಹಣಾಹಣಿಗೆ ಸಜ್ಜಾಗಿದೆ.
ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಇಂದು (ಶುಕ್ರವಾರ) ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ರಿಚರ್ಡ್ ಕೆಟಲ್‌ಬರೋ ಅವರನ್ನು ಆನ್ - ಫೀಲ್ಡ್ ಅಂಪೈರ್‌ಗಳು ಎಂದು ಹೆಸರಿಸಿದೆ. ಇತರ ಜೋಯಲ್ ವಿಲ್ಸನ್ ಅವರು ಮೂರನೇ ಅಂಪೈರ್, ನಾಲ್ಕನೇ ಅಂಪೈರ್ ಕ್ರಿಸ್ ಗಫಾನಿ ಮತ್ತು ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಇರುತ್ತಾರೆ. ಇವರೆಲ್ಲರೂ ಸೆಮಿಫೈನಲ್‌ನಲ್ಲಿ ಅಫಿಶಿಂಗ್ ತಂಡಗಳ ಭಾಗವಾಗಿದ್ದರು.
"ಕೆಟಲ್‌ಬರೋ ಅವರಿಗೆ ಇದು ಎರಡನೇ ವಿಶ್ವಕಪ್ ಫೈನಲ್ ಪಂದ್ಯವಾಗಿದೆ. 2015ರ ಕ್ರಿಕೆಟ್ ವಿಶ್ವಕಪ್‌ನ ಫೈನಲ್‌ನಲ್ಲಿ ರಿಚರ್ಡ್ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇಲ್ಲಿಂಗ್‌ವರ್ತ್‌ಗೆ ಇದು ಎರಡನೇ ವಿಶ್ವಕಪ್ ಪಂದ್ಯವಾಗಿದ್ದು, ಮೊದಲ ಬಾರಿಗೆ ಫೈನಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ" ಎಂದು ಐಸಿಸಿ ಹೇಳಿದೆ.
ಆಸಿಸ್ ವಿರುದ್ಧ ಭಾರತವೇ ಪ್ರಬಲ: ಇತಿಹಾಸದಲ್ಲಿ ಆಸ್ಟ್ರೇಲಿಯಾದ ಭಾರತ ತಂಡದ ವಿರುದ್ಧ ಮೇಲುಗೈ ಸಾಧಿಸಿದ್ದರೂ, ಪ್ರಸಕ್ತ ವರ್ಷದಲ್ಲಿ ಭಾರತ ತಂಡ ಕಾಂಗರೂಗಳ ವಿರುದ್ಧ ಉತ್ತಮ ಪ್ರದರ್ಶನ ನೀಡಿದೆ. ಏಷ್ಯಾಕಪ್ ಜಯಿಸಿ ತವರಿಗೆ ಮರಳಿದ ಟೀಮ್ ಇಂಡಿಯಾ ವಿಶ್ವಕಪ್ ತಯಾರಿ ಹಿನ್ನೆಲೆಯಲ್ಲಿ ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತ್ತು. ಈ ಸರಣಿಯನ್ನು 2-1ರಿಂದ ಭಾರತ ಗೆದ್ದುಕೊಂಡಿತ್ತು. ಭಾರತ 2023ರ ವಿಶ್ವಕಪ್‌ನ ಮೊದಲ ಪಂದ್ಯವನ್ನು ಚೆನ್ನೈನ ಚೆಪಾಕ್ನಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಆಡಿತು. ಈ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದಿತು. ಈ ಗೆಲುವಿನ ಆರಂಭದ ನಂತರ ಸೋಲಿಲ್ಲದ ಸರದಾರನಂತೆ ಫೈನಲ್ವರೆಗೂ ಅಜೇಯವಾಗಿ ತಲುಪಿದೆ.
ವಿಶ್ವಕಪ್ಗೆ ವಿಜೃಂಭಣೆಯ ತೆರೆ: 2023ರ ವಿಶ್ವಕಪ್ ಫೈನಲ್ಗೂ ಮುನ್ನ ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ವಿಜೃಂಭಣೆಯಿಂದ ತೆರೆಕಾಣಲಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸಹ ಇರಲಿದ್ದಾರೆ. ಅಲ್ಲದೇ ಭಾರತ ತಂಡಕ್ಕೆ ಆಡಿದ ಮಾಜಿ ಆಟಗಾರರಾದ ಸಚಿನ್ ತೆಂಡೂಲ್ಕರ್, ಮಹೇಂದ್ರ ಸಿಂಗ್ ಧೋನಿ, ಕಪಿಲ್ ದೇವ್ ಅಲ್ಲದೇ ದಿಗ್ಗಜ ಆಟಗಾರರು ಮೈದಾನದಲ್ಲಿ ಸೇರಲಿದ್ದಾರೆ.
ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡವು ಏರ್ ಶೋ ನಡೆಸಲಿದೆ. ಇದಕ್ಕಾಗಿ ಶುಕ್ರವಾರ, ಶನಿವಾರ ವೈಮಾನಿಕ ಪ್ರದರ್ಶನದ ತಾಲೀಮು ನಡೆಸಲಾಗುತ್ತಿದೆ. ಹಾಲಿವುಡ್ ಪಾಪ್ ಐಕಾನ್ ದುವಾ ಲಿಪಾ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಪ್ರೀತಮ್ ಚಕ್ರವರ್ತಿ ಮತ್ತು ಆದಿತ್ಯ ಗಾಧ್ವಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:ವಿಶ್ವಕಪ್ ಫೈನಲ್ ವೀಕ್ಷಿಸಲಿದ್ದಾರೆ ಪ್ರಧಾನಿ ಮೋದಿ: ಅದ್ಧೂರಿ ಕಾರ್ಯಕ್ರಮದ ಮೂಲಕ ಟೂರ್ನಿಗೆ ತೆರೆ