ಮುಂಬೈ:ಸತತ 2 ಸೋಲುಗಳ ನಂತರ ಅದ್ಬುತವಾಗಿ ಕಮ್ಬ್ಯಾಕ್ ಮಾಡಿರುವ ಸನ್ರೈಸರ್ಸ್ ಹೈದರಾಬಾದ್ ತಂಡ ಸ್ಟಾರ್ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಅನುಪಸ್ಥಿತಿಯಲ್ಲಿ ಶುಕ್ರವಾರ ಬಲಿಷ್ಠ ಕೆಕೆಆರ್ ವಿರುದ್ಧ ಸೆಣಸಾಡಲಿದೆ. ಟೂರ್ನಮೆಂಟ್ ಆರಂಭದಲ್ಲಿ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ನಂತರ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಟೂರ್ನಿಯಲ್ಲಿ ಅಜೇಯರಾಗುಳಿದಿದ್ದ ಗುಜರಾತ್ ಟೈಟನ್ಸ್ ತಂಡವನ್ನು ಬಗ್ಗುಬಡಿದಿರುವ ಹೈದರಾಬಾದ್ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ.
ಆದರೆ ತಂಡದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ತಂಡಕ್ಕೆ ನೆರವಾಗಿದ್ದ ವಾಷಿಂಗ್ಟನ್ ಸುಂದರ್ ಗಾಯದ ಕಾರಣ ತಂಡದಿಂದ ಹೊರಬಿದ್ದಿದ್ದಾರೆ. ಅವರು 4 ಪಂದ್ಯಗಳಲ್ಲಿ ಒಂದು ಅರ್ಧಶತಕ ಮತ್ತು 4 ವಿಕೆಟ್ ಪಡೆದಿದ್ದರು. ಈಗಾಗಲೇ ಕೋಚ್ ಟಾಪ್ ಮೂಡಿ ಸುಂದರ್ ಅವರು ಕಡಿಮೆ ಅಂದರೂ 2 -3 ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇವರ ಜಾಗಕ್ಕೆ ಕನ್ನಡಿಗರಾದ ಜಗದೀಶ್ ಸುಚಿತ್ ಅಥವಾ ಶ್ರೇಯಸ್ ಗೋಪಾಲ್ ಕಣಕ್ಕಿಳಿಯಲಿದ್ದಾರೆ.
ಇನ್ನು ಆರಂಭಿಕರಾದ ಅಭಿಷೇಕ್ ಶರ್ಮಾ ಕಳೆದ 2 ಪಂದ್ಯಗಳಲ್ಲಿ 75 ಮತ್ತು 42 ರನ್ ಹಾಗೂ ನಾಯಕ ವಿಲಿಯಮ್ಸನ್ 32 ಮತ್ತು 57 ರನ್ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಉತ್ತಮ ಟಚ್ನಲ್ಲಿರುವ ರಾಹುಲ್ ತ್ರಿಪಾಠಿ ಕಳೆದ ಪಂದ್ಯದಲ್ಲಿ ರಿಟೈರ್ಡ್ ಹರ್ಟ್ ಆಗಿ ವಾಪಸ್ ತೆರಳಿದ್ದರು. ಅವರ ಅನುಪಸ್ಥಿತಿ ನಾಳಿನ ಪಂದ್ಯಕ್ಕೆ ನಿರ್ಣಾಯಕವಾಗಲಿದೆ.
ಇನ್ನುಳಿದಂತೆ ವಿಂಡೀಸ್ನ ನಿಕೋಲಸ್ ಪೂರನ್ ಕಳೆದ ಪಂದ್ಯದಲ್ಲಿ ಫಾರ್ಮ್ಗೆ ಮರಳಿರುವುದು ತಂಡಕ್ಕೆ ಬಲ ತಂದಿದೆ. ಅನುಭವಿ ಐಡೆನ್ ಮಾರ್ಕ್ರಮ್ ತಮ್ಮ ಜವಾಬ್ದಾರಿಯನ್ನು ಕೆಕೆಆರ್ ವಿರುದ್ಧವೂ ನಿರ್ವಹಿಸಿದರೆ ಹ್ಯಾಟ್ರಿಕ್ ಗೆಲುವು ಪಡೆಯಲು ಸಾಧ್ಯವಾಗಲಿದೆ.