ಕೊಲಂಬೊ: ಭಾರತ ತಂಡ ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 3 ವಿಕೆಟ್ಗಳ ವಿರೋಚಿತ ಗೆಲುವು ಸಾಧಿಸಿತು. ದೀಪಕ್ ಚಹಾರ್ ಮತ್ತು ಭುವನೇಶ್ವರ್ ಕುಮಾರ್ ಅವರ ಅದ್ಭುತ ಆಟದಿಂದ ಸೋಲಿನ ಸುಳಿಯಲ್ಲಿದ್ದ ಭಾರತ ತಂಡ ಅತ್ಯುತ್ತಮವಾಗಿ ತಿರುಗಿಬಿದ್ದು, ಇನ್ನು ಒಂದು ಪಂದ್ಯ ಬಾಕಿ ಉಳಿದಿರುವಂತೆ 2-0ಯಲ್ಲಿ ಸರಣಿಯನ್ನು ವಶಪಡಿಸಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ್ದ ಅತಿಥೇಯ ತಂಡ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 275 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಭಾರತ 7 ವಿಕೆಟ್ ಕಳೆದುಕೊಂಡು ಇನ್ನು 5 ಎಸೆತಗಳು ಇರುವಂತೆ ಗೆಲುವು ಸಾಧಿಸಿತು. ಆದರೆ 115ಕ್ಕೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿದ್ದ ತಂಡಕ್ಕೆ ಸೂರ್ಯಕುಮಾರ್ ಯಾದವ್(53), ದೀಪಕ್ ಚಹಾರ್ ಅಜೇಯ 69 ಮತ್ತು ಭುವನೇಶ್ವರ್ ಕುಮಾರ್ ಅಜೇಯ 19 ರನ್ ಗಳಿಸಿ ಅವಿಸ್ಮರಣೀಯ ಗೆಲುವು ತಂದುಕೊಟ್ಟರು.
ಸೋಲಿನ ಸುಳಿಗೆ ಸಿಲುಕಿದರೂ ಎದೆಗುಂದದೇ ದೃಢ ನಂಬಿಕೆಯಿಂದ ಆಡಿದ್ದಕ್ಕಾಗಿ ಕೋಚ್ ರಾಹುಲ್ ದ್ರಾವಿಡ್ ಯುವ ತಂಡವನ್ನು ಚಾಂಪಿಯನ್ ತಂಡವೆಂದು, ಇದೊಂದು ಅದ್ಭುತ ಗೆಲುವು ಎಂದು ಕೊಂಡಾಡಿದ್ದಾರೆ.