ಭಾರತ ತಂಡದ ವೇಗದ ಬೌಲರ್ ರೇಣುಕಾ ಸಿಂಗ್ ಅವರು ಇಂಗ್ಲೆಂಡ್ ವಿರುದ್ಧ ನಿನ್ನೆ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಐದು ವಿಕೆಟ್ ಪಡೆದು ದಾಖಲೆ ಬರೆದರು. ಇದು ಅವರ ವೈಯಕ್ತಿಕ ಬೆಸ್ಟ್ ಫರ್ಫಾಮೆನ್ಸ್ ಆಗಿದ್ದು, ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್ ಮಾತ್ರ ಬಿಟ್ಟುಕೊಟ್ಟಿದ್ದರು. ಕರಾರುವಾಕ್ ಬೌಲಿಂಗ್ ಹೊರತಾಗಿಯೂ ಇಂಗ್ಲೆಂಡ್ ತಂಡ ಭಾರತಕ್ಕೆ 152 ರನ್ ಟಾರ್ಗೆಟ್ ನೀಡಿತ್ತು. ಈ ಗುರಿ ಮುಟ್ಟುವಲ್ಲಿ ಭಾರತದ ವನಿತೆಯರು 11 ರನ್‌ಗಳಿಂದ ಎಡವಿದರು.
ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ದುಕೊಂಡ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರ ನಿರ್ಧಾರ ಸರಿ ಎಂಬಂತೆ ಪವರ್ ಪ್ಲೇಯೊಳಗೆ ಇಂಗ್ಲೆಂಡ್ನ ಪ್ರಮುಖ ಮೂರು ವಿಕೆಟ್‌ಗಳನ್ನು ರೇಣುಕಾ ಸಿಂಗ್ ಕಬಳಿಸಿದರು. 1, 3 ಮತ್ತು 5ನೇ ಓವರ್‌ಗಳಲ್ಲಿ ಒಂದೊಂದು ವಿಕೆಟ್ ಪಡೆದು ಮುನ್ನುಗ್ಗಿದ ರೇಣುಕಾ, ಕೊನೆಯ ಓವರ್ನಲ್ಲಿ ಮತ್ತೆರಡು ವಿಕೆಟ್ ಉರುಳಿಸಿದರು.
ರೇಣುಕಾ 'ಪಂಚ್'ಕಜ್ಜಾಯ:ಇದು ಟಿ20ಯಲ್ಲಿ ರೇಣುಕಾ ಅವರ ಚೊಚ್ಚಲ ಐದು ವಿಕೆಟ್ ಸಾಧನೆಯಾಗಿದೆ. ಭಾರತೀಯ ಪುರುಷ ಮತ್ತು ಮಹಿಳಾ ಕ್ರಿಕೆಟ್ನಲ್ಲಿಯೂ ಟಿ20 ವಿಶ್ವಕಪ್ನಲ್ಲಿ 5 ವಿಕೆಟ್ ಸಾಧನೆ ಹಿಂದೆಂದೂ ಆಗಿರಲಿಲ್ಲ. ವಿಶ್ವಕಪ್ನಲ್ಲಿ 5 ವಿಕೆಟ್ ಗುಚ್ಚ ಪಡೆದ ಮೊದಲ ಭಾರತೀಯ ಬೌಲರ್ ಎಂಬ ದಾಖಲೆಯನ್ನೂ ಪ್ರತಿಭಾವಂತ ಆಟಗಾರ್ತಿ ಸೃಷ್ಟಿಸಿದರು.
ಹೀಗಿತ್ತು ರೇಣುಕಾ ಬೌಲಿಂಗ್ ದಾಳಿ: ಮೊದಲ ಓವರ್ನಲ್ಲೇ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ ಅವರ ವಿಕೆಟ್ ಅನ್ನು ಲೆಂತ್ ಬೌಲಿಂಗ್ನಿಂದ ತೆಗೆದರು. ಡೇನಿಯಲ್ ವ್ಯಾಟ್ ಡಕೌಟ್ ಆಗಿ ಪೆವಿಲಿಯನ್ ಹಾದಿ ಹಿಡಿಯಬೇಕಾಯ್ತು. ಮೂರನೇ ವಿಕೆಟ್ ಆಗಿ ಕ್ರೀಸಿಗಿಳಿದ ಆಲಿಸ್ ಕ್ಯಾಪ್ಸಿ ಅವರು ರೇಣುಕಾರ ಮೂರನೇ ಓವರ್ನ ಮೊದಲ ಗುಡ್ಲೆಂತ್ ಬಾಲ್ನಲ್ಲಿ ಕ್ಲೀನ್ ಬೌಲ್ಡ್ ಆದರು. 5ನೇ ಓವರ್ನ 4ನೇ ಎಸೆತದಲ್ಲಿ ಕ್ಯಾಪ್ಸಿಯವರನ್ನು ಬೌಲ್ಡ್ ಮಾಡಿದ ಬಾಲ್ನ ರೀಪ್ಲೇಯಂತೆ ಎಸೆದ ರೇಣುಕಾ ಸಿಂಗ್ ಸೋಫಿಯಾ ಡಂಕ್ಲಿ ಅವರ ವಿಕೆಟ್ ಕಿತ್ತರು. ಪವರ್‌ಪ್ಲೇ ಕೊನೆಯಲ್ಲಿ ಇಂಗ್ಲೆಂಡ್ 37/3ರಲ್ಲಿ ಕಳೆದುಕೊಂಡು ಸಂಕಷ್ಟದಲ್ಲಿತ್ತು.