ಮುಂಬೈ:ಭಾರತೀಯ ಚಿತ್ರರಂಗದಲ್ಲಿ ನಟ ಯಶ್ ನಟನೆಯ ಕೆಜಿಎಫ್ ಚಾಪ್ಟರ್-2 ಹೊಸದೊಂದು ಇತಿಹಾಸ ಸೃಷ್ಟಿಸಿದೆ. ಈಗಾಗಲೇ ತೆರೆ ಕಂಡಿರುವ ಚಿತ್ರ ನೂರಾರು ಕೋಟಿ ಹಣ ಜೇಬಿಗೆ ಇಳಿಸಿಕೊಂಡಿದೆ. ಇದರ ಮಧ್ಯೆ ಐಪಿಎಲ್ ಹವಾ ಕೂಡ ಜೋರಾಗಿದೆ. ಟೂರ್ನಿಯಲ್ಲಿ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡ್ತಿದ್ದು, ತಂಡಕ್ಕೆ ಬೆಂಬಲ ನೀಡಲು ನಟ ಸಂಜಯ್ ದತ್ ಮತ್ತು ರವೀನಾ ಟಂಡನ್ ಇಂದಿನ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.
ರವೀನಾ ಟಂಡನ್ ಮತ್ತು ಸಂಜು ಬಾಬಾ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಜರ್ಸಿ ಹಾಕಿಕೊಂಡು ಮ್ಯಾಚ್ ವೀಕ್ಷಣೆ ಮಾಡಿದ್ದಾರೆ. ಜೊತೆಗೆ ತಂಡಕ್ಕೆ ಸಪೋರ್ಟ್ ಮಾಡಿದ್ದು, ಇದನ್ನು ಖುದ್ದಾಗಿ ಆರ್‌ಸಿಬಿ ಹಾಗೂ ಹೊಂಬಾಳೆ ಚಿತ್ರತಂಡ ತನ್ನ ಟ್ವಿಟರ್ ಅಕೌಂಟ್ನಲ್ಲಿ ಹಾಕಿಕೊಂಡಿವೆ. ಕೆಜಿಎಫ್ನಲ್ಲಿ ಅಧೀರ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಸಂಜಯ್ ದತ್, ಹಾಗೂ ಪ್ರಧಾನಿ ಹುದ್ದೆಯಲ್ಲಿ ಮಿಂಚಿರುವ ರವೀನಾ ಟಂಡನ್ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದು, ಇವರ ಜೊತೆಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಸಹ ಸಾಥ್ ನೀಡಿದ್ದಾರೆ.