ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ತಮ್ಮ ಆಟಗಾರರಿಗೆ ಧನ್ಯವಾದ ಅರ್ಪಿಸಲು ವಿರಾಟ್ ಕೊಹ್ಲಿ, ಎಬಿಡಿ ವಿಲಿಯರ್ಸ್ ಹಾಗೂ ತಂಡದ ಇತರೆ ಆಟಗಾರರು ಕಾಣಿಸಿಕೊಂಡಿರುವ ವಿಶೇಷ ವಿಡಿಯೋ ಸಾಂಗ್ವೊಂದನ್ನು ಮಂಗಳವಾರ ಬಿಡುಗಡೆ ಮಾಡಿದೆ.
ಈ ವಿಡಿಯೋವನ್ನು ಯುಜ್ವೇಂದ್ರ ಚಹಲ್ ಪತ್ನಿ ಧನಶ್ರಿ ವರ್ಮಾ ನಿರ್ದೇಶನ ಮತ್ತು ಕೋರಿಯೋಗ್ರಫಿ ಮಾಡಿದ್ದಾರೆ. ಹರ್ಷ ಉಪಾಧ್ಯಾಯ ಸಂಗೀತ ಸಂಯೋಜನೆ ಮಾಡಿದ್ದಾರೆ.
'ನೆವರ್ ಗಿವಪ್, ಹಿಂದೆ ತಿರುಗದೆ, ಮುನ್ನುಗ್ಗುತ್ತಿರಿ' ಎಂದು ತಲೆಬರಹ ನೀಡಿದೆ. ರಾಯಲ್ ಚಾಲೆಂಜರ್ಸ್ ಜರ್ಸಿ ಧರಿಸಿದಾಗ ತಂಡಕ್ಕಾಗಿ ಶೇ.100ರಷ್ಟನ್ನು ನೀಡಿರುವ ನಮ್ಮ ಎಲ್ಲಾ ಆಟಗಾರರಿಗೆ ವಿಶೇಷ ಧನ್ಯವಾದಗಳು ಎಂದು ಆಟಗಾರರಿಗೆ ಫ್ರಾಂಚೈಸಿ ಧನ್ಯವಾದಗಳನ್ನು ಅರ್ಪಿಸಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಈ ನೆವರ್ ಗಿವಪ್ ಸಾಂಗ್ನಲ್ಲಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಮ್ಯಾಕ್ಸ್ವೆಲ್, ಪಡಿಕ್ಕಲ್, ಚಹಾಲ್, ಸೇರಿದಂತೆ ಆರ್ಸಿಬಿಯ ಸಹ ಆಟಗಾರರು ಸಂಭ್ರಮದಿಂದ ನೃತ್ಯ ಮಾಡಿದ್ದಾರೆ. ಅದರಲ್ಲೂ ಇತ್ತೀಚೆಗೆ ನಿವೃತ್ತಿ ಘೋಷಿಸಿದ ದಕ್ಷಿಣ ಅಫ್ರಿಕಾದ ಎಬಿ ಡಿ ವಿಲಿಯರ್ಸ್ ಪ್ರತ್ಯೇಕವಾಗಿ ಕಾಣಿಸಿಕೊಂಡಿದ್ದಾರೆ.
2022ರ ಆವೃತ್ತಿಯಲ್ಲಿ ಮೆಗಾ ಹರಾಜು ಇರುವುದರಿಂದ ಕೇವಲ 4 ಆಟಗಾರರನ್ನು ಮಾತ್ರ ಫ್ರಾಂಚೈಸಿ ರೀಟೈನ್ ಮಾಡಿಕೊಳ್ಳಲಿದೆ. ಹಾಗಾಗಿ ಇಷ್ಟು ವರ್ಷ ತಂಡಕ್ಕಾಗಿ ಸೇವೆ ಸಲ್ಲಿಸಿದ ಆಟಗಾರರಿಗೆ ಈ ರೀತಿ ಬೆಂಗಳೂರು ಫ್ರಾಂಚೈಸಿ ಧನ್ಯವಾದ ಅರ್ಪಿಸಿದೆ.
ಇದನ್ನೂ ಓದಿ:ನಮ್ಮಿಬ್ಬರನ್ನು ಡೆಲ್ಲಿ ಕ್ಯಾಪಿಟಲ್ಸ್ ರೀಟೈನ್ ಮಾಡಿಕೊಳ್ಳುವ ಚಾನ್ಸ್ ಕಡಿಮೆ: ಆರ್.ಅಶ್ವಿನ್