ಬೆಂಗಳೂರು: ಕೋವಿಡ್ 19 ಹೋರಾಟಕ್ಕೆ ಕಳೆದ ವರ್ಷದಿಂದಲೂ ವಿವಿಧ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದ್ದ ಐಪಿಎಲ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಇದೀಗ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟಕ್ಕೆ ತಮ್ಮ ಮೂಲ ಸಂಸ್ಥೆ ಡಿಯಾಜಿಯೋ ಮೂಲಕ 45 ಕೊಟಿ ರೂ. ದೇಣಿಗೆ ನೀಡಿದೆ.
ಈ ಹಣದಿಂದ ಭಾರತದ ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಅಗತ್ಯವಾದ ವೈದ್ಯಕೀಯ ಸಲಕರಣೆ ಮತ್ತು ಆಕ್ಸಿಜನ್ ಒದಗಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧ್ಯಕ್ಷ ಮತ್ತು ಡಿಯಾಜಿಯೋದ ಎಂಡಿ ಆನಂದ್ ಕೃಪಾಲು ಈ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡಲು ನಿರ್ಧರಿಸಿದ್ದಾರೆಂದು ಆರ್ಸಿಬಿ ತನ್ನ ಟ್ವಿಟರ್ನಲ್ಲಿ ತಿಳಿಸಿದೆ.
ದೇಶದ 21 ಜಿಲ್ಲೆಗಳಲ್ಲಿ ನೋಡಲ್ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಾಮರ್ಥ್ಯವನ್ನು ಹೆಚ್ಚಿಸಲು (ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್) ಪಿಎಸ್‌ಎ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಿದೆ.
ಇದರ ಜೊತೆಗೆ ಕೋವಿಡ್ನಿಂದ ತೊಂದರೆಗೀಡಾಗಿರುವ 15 ಜಿಲ್ಲೆಗಳ 16 ಪೂರ್ವನಿರ್ಮಿತ ಹಾಸಿಗೆಗಳ ಮಿನಿ ಆಸ್ಪತ್ರೆಯನ್ನು ನಿರ್ಮಿಸಲಿದ್ದು, ಇದರಲ್ಲಿ ಪಿಎಸ್‌ಎ ಆಕ್ಸಿಜನ್ ಪ್ಲಾಂಟ್ ಸೌಲಭ್ಯ ಒದಗಿಸಲಿದೆ. ಜೊತೆಗೆ ಕಂಪನಿಯು ಆಕ್ಸಿಜನ್ ಕಾನ್ಸಂಟ್ರೇಟರ್, ಆಕ್ಸಿಜನ್ ಸಿಲಿಂಡರ್‌ಗಳು, ವೆಂಟಿಲೇಟರ್ ಹಾಸಿಗೆಗಳು ಮತ್ತು ರೋಗಿಗಳಿಗೆ ಬಳಸುವ ಇತರ ಸಾಧನಗಳು ಸೇರಿದಂತೆ 10 ರಾಜ್ಯಗಳಲ್ಲಿ ವೈದ್ಯಕೀಯ ಉಪಕರಣಗಳನ್ನು ದೇಣಿಗೆಯಾಗಿ ನೀಡಲಿದೆ.
ಪ್ರಸ್ತುತ ರಾಷ್ಟ್ರ ಊಹಿಸಲಾಗದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ನಾವು ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸಲು ಬಯಸುತ್ತೇವೆ. ದೇಶದ ಜನತೆಯ ಪರವಾಗಿ ನಿಲ್ಲಲು ಬಯಸುತ್ತೇನೆ. ದೇಶದಲ್ಲಿ ದೀರ್ಘಕಾಲೀನ ವೈದ್ಯಕೀಯ ಮೂಲ ಸೌಕರ್ಯಗಳು, ವಿಶೇಷವಾಗಿ ಆಸ್ಪತ್ರೆಯ ಹಾಸಿಗೆಗಳು ಮತ್ತು ಆಮ್ಲಜನಕ ಹೆಚ್ಚು ಅಗತ್ಯವಾಗಿದೆ. ಆದ್ದರಿಂದ ನಮ್ಮ ಈ ಕೊಡುಗೆ ಪ್ರತಿ ರಾಜ್ಯವನ್ನು ತಲುಪುತ್ತದೆ ಮತ್ತು ಭಾರತದ ಚೇತರಿಕೆಗೆ ಒಂದು ಪಾತ್ರವನ್ನು ವಹಿಸಲು ಸಹಾಯ ಮಾಡುತ್ತದೆ ಎಂದು ನಾವು ಭಾವಿಸುತ್ತೇವೆ. ಇಂದಿನ ದೇಣಿಗೆ ಸೇರಿದಂತೆ ದೇಶದ ಕೋವಿಡ್ 19 ಪರಿಹಾರಕ್ಕೆ ಡಿಯಾಜಿಯೋ 130 ಕೋಟಿ ನೀಡಿದಂತಾಗಿದೆ ಎಂದು ಡಿಯಾಜಿಯೋ ಸಿಇಒ ಮತ್ತು ಎಂಡಿ ಹಾಗೂ ಆರ್ಸಿಬಿ ಅಧ್ಯಕ್ಷ ಆನಂದ್ ಕೃಪಾಲು ತಿಳಿಸಿದ್ದಾರೆ.
ಕಂಪನಿಯು ‘ಒಂದು ಜಿಲ್ಲಾ ಒಂದು ರಾಜ್ಯ’ ವಿಧಾನವನ್ನು ಅಳವಡಿಸಿಕೊಂಡಿದ್ದು, ಪ್ರತಿ ರಾಜ್ಯ ಮತ್ತು ದೇಶದ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕನಿಷ್ಠ ಒಂದು ಜಿಲ್ಲೆಗೆ ತಮ್ಮ ಈ ಬೆಂಬಲವನ್ನು ತಲುಪುವುದನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಇದನ್ನು ಓದಿ:ಕೋವಿಡ್ ಹೋರಾಟಕ್ಕೆ 30 ಕೋಟಿ ರೂ ದೇಣಿಗೆ ನೀಡಿದ ಸನ್ರೈಸರ್ಸ್ ಹೈದರಾಬಾದ್