ಅಹಮದಾಬಾದ್: ಸತತ ನಾಲ್ಕು ಪಂದ್ಯಗಳ ಜಯದ ನಂತರ ಸಿಎಸ್ಕೆ ವಿರುದ್ಧ ಮೊದಲ ಸೋಲು ಕಂಡಿರುವ ಆರ್ಸಿಬಿ ನಾಳಿನ ಪಂದ್ಯದಲ್ಲಿ ಕಿವೀಸ್ ಸ್ಟಾರ್ ಫಿನ್ ಅಲೆನ್ಗೆ ಅವಕಾಶ ನೀಡುವ ಸುಳಿವನ್ನು ಬಿಟ್ಟುಕೊಟ್ಟಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಸಿಎಸ್ಕೆ ನೀಡಿ 192 ರನ್ಗಳ ಗುರಿಯನ್ನು ಮುಟ್ಟಲಾಗದ ಆರ್ಸಿಬಿ ಕೇವಲ 122 ರನ್ಗಳಿಗೆ ಮುಗ್ಗರಿಸಿ 69 ರನ್ಗಳ ಸೋಲು ಕಂಡಿತ್ತು. ಇದೀಗ ನಾಳೆ ವಿಶ್ವದ ಅತಿ ದೊಡ್ಡ ಸ್ಟೇಡಿಯಂ ಮೊಟೆರಾದಲ್ಲಿ ಡೆಲ್ಲಿ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಡೇನಿಯಲ್ ಕ್ರಿಸ್ಚಿಯನ್ ಬದಲಿಗೆ ನ್ಯೂಜಿಲ್ಯಾಂಡ್ನ ಉದಯೋನ್ಮುಖ ತಾರೆ ಫಿನ್ ಅಲೆನ್ರನ್ನು ಕಣಕ್ಕಿಳಿಸುವ ಸಾಧ್ಯತೆ ಇದ್ದು, ಇದಕ್ಕೆ ಪೂರಕ ಎಂಬಂತೆ ಆರ್ಸಿಬಿ ಟ್ವಿಟರ್ನಲ್ಲಿ ಸುಳಿವು ನೀಡಿದೆ.
ಅಲೆನ್ ಅಭ್ಯಾಸ ಮಾಡುತ್ತಿರುವ ಫೋಟೋವೊಂದನ್ನು ಟ್ವೀಟ್ ಮಾಡಿರುವ ಆರ್ಸಿಬಿ, " ನಾಳೆ ನಡೆಯುವ ಪಂದ್ಯದಲ್ಲಿ ಫಿನ್ ಅಲೆನ್ಗಾಗಿ ನಾವೆಲ್ಲರೂ ಕಾಯುತ್ತಿದ್ದೇವೆ" ಎಂದು ಟ್ವೀಟ್ ಮಾಡಿದೆ.
22 ವರ್ಷದ ಫಿನ್ ಅಲೆನ್ ಇತ್ತೀಚೆಗೆ ಮುಕ್ತಾಯವಾಗಿದ್ದ ಕಿವೀಸ್ ಟಿ-20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿರುವ ಅವರು ಚುಟುಕು ಕ್ರಿಕೆಟ್ನಲ್ಲಿ 16 ಪಂದ್ಯಗಳಲ್ಲಿ 187 ಸ್ಟ್ರೈಕ್ರೇಟ್ನಲ್ಲಿ 625 ರನ್ಗಳಿಸಿದ್ದಾರೆ. ಇದರಲ್ಲಿ 7 ಅರ್ಧಶತಕಗಳು ಸೇರಿವೆ. ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಪದಾರ್ಪಣೆ ಮಾಡಿದ್ದ ಅವರು ಕೇವಲ 17 ಎಸೆತಗಳಲ್ಲಿ ಅರ್ಧಶತಕ ಸಿಡಿಸಿ ಗಮನ ಸೆಳೆದಿದ್ದರು. ಆರ್ಸಿಬಿ ಅಲೆನ್ರನ್ನು 14ನೇ ಆವೃತ್ತಿಯಿಂದ ಹಿಂದೆ ಸರಿದಿದ್ದ ಆಸ್ಟ್ರೇಲಿಯಾದ 20 ಲಕ್ಷ ಮುಖಬೆಲೆಯ ಜೋಶ್ ಪಿಲಿಪ್ಪೆ ಬದಲಿಗೆ ತಂಡಕ್ಕೆ ಸೇರಿಸಿಕೊಂಡಿದ್ದರು.
ಇದನ್ನು ಓದಿ: ಆರ್ಸಿಬಿ ಸ್ಟಾರ್ ಫಿನ್ ಅಲೆನ್ ಅಬ್ಬರ; ಬಾಂಗ್ಲಾ ವಿರುದ್ಧ ಕಿವೀಸ್ಗೆ ವಿಜಯ