ಹೈದರಾಬಾದ್:ಬಹು ನೀರಿಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 14ನೇ ಆವೃತ್ತಿ ದ್ವೀತಿಯಾರ್ಧದ ಪಂದ್ಯಗಳು ನಾಳೆಯಿಂದ ಆರಂಭಗೊಳ್ಳಲಿವೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್- ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ನಡೆಸಲಿದ್ದು, ಮರು ದಿನವೇ ರಾಯಲ್ ಚಾಲೆಂಜರ್ಸ್ ಬೆಂಗಳೂರು - ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಮುಖಾಮುಖಿಯಾಗಲಿವೆ.
ಸೆಪ್ಟೆಂಬರ್ 20ರಂದು ನಡೆಯಲಿರುವ ಆರ್ಸಿಬಿ ಪಂದ್ಯದ ವೇಳೆ, ಆಟಗಾರರು ನೀಲಿ ಜರ್ಸಿ ತೊಟ್ಟು ಮೈದಾನಕ್ಕಿಳಿಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರು ಫ್ರಾಂಚೈಸಿ ಈಗಾಗಲೇ ಮಾಹಿತಿ ಹಂಚಿಕೊಂಡಿದೆ. ಇದರ ಮಧ್ಯೆ ಮತ್ತೊಂದು ಮಾಹಿತಿ ಬಹಿರಂಗಗೊಂಡಿದ್ದು, ತಂಡದ ಆಟಗಾರರು ಹಾಕಿಕೊಳ್ಳುವ ನೀಲಿ ಜರ್ಸಿ ವಿಶೇಷ ಯೋಜನೆಗೋಸ್ಕರ ಹರಾಜು ಹಾಕಲು ನಿರ್ಧರಿಸಿದೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹಾಕಿಕೊಳ್ಳಲಿರುವ ನೀಲಿ ಜರ್ಸಿ ಅನಾವರಣಗೊಳಿಸಿ ಮಾತನಾಡಿರುವ ವಿರಾಟ್ ಕೊಹ್ಲಿ, ಈ ಜರ್ಸಿಗಳನ್ನ ಹರಾಜು ಮಾಡಲು ನಿರ್ಧಾರ ಮಾಡಲಾಗಿದ್ದು, ಇದರಿಂದ ಬರುವ ಹಣದಿಂದ ಕಡಿಮೆ ಸೌಲಭ್ಯ ಇರುವ ಸಮುದಾಯಗಳಿಗೆ ಉಚಿತ ಕೋವಿಡ್ ಲಸಿಕೆ ನೀಡಲು ಬಳಕೆ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿರಿ:'ಕೌನ್ ಬನೇಗಾ ಕರೋಡ್ ಪತಿ'ಯಲ್ಲಿ 25 ಲಕ್ಷ ರೂ ಗೆದ್ದ ನೀರಜ್ ಚೋಪ್ರಾ,ಶ್ರೀಜೇಶ್..
ನಾನು ಕ್ರೀಡೆಯಲ್ಲಿ ತೊಡಗಿರುವ ಕಾಲದಾಗಿನಿಂದಲೂ ನೀಲಿ ಬಣ್ಣ ಮಹತ್ವ ಪಡೆದುಕೊಂಡಿದೆ. ನೀಲಿ ಜರ್ಸಿ ಆರ್ಸಿಬಿಗೆ ಒಂದು ಮೈಲಿಗಲ್ಲಾಗಿದೆ. ಭಾರತದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ವೇಗಗೊಳಿಸಲು ಹರಾಜು ಹಣ ಬಳಕೆ ಮಾಡಿಕೊಳ್ಳಲಾಗುವುದು ಎಂದರು. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಆಡಿರುವ 7 ಪಂದ್ಯಗಳಲ್ಲಿ 5ರಲ್ಲಿ ಗೆಲುವು ಸಾಧಿಸಿದ್ದು, ಪಾಯಿಂಟ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ.