ನವದೆಹಲಿ:ಗಾಯಗೊಂಡು ಏಷ್ಯಾ ಕಪ್ ಟೂರ್ನಿಯಿಂದ ಹೊರಬಿದ್ದಿರುವ ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಅವರ ಮೊಣಕಾಲಿನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ. ಶೀಘ್ರವೇ ಅವರು ಗಾಯದಿಂದ ಚೇತರಿಸಿಕೊಂಡು ಕಣಕ್ಕಿಳಿಯುವ ಸಾಧ್ಯತೆ ಇದೆ.
ತಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಜಡೇಜಾ, ಮೊಣಕಾಲು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಚೇತರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ನನ್ನ ತಂಡದ ಸದಸ್ಯರು, ಬಿಸಿಸಿಐ, ಸಹಾಯಕ ಸಿಬ್ಬಂದಿ, ಫಿಸಿಯೋಗಳು, ವೈದ್ಯರು ಮತ್ತು ಅಭಿಮಾನಿಗಳು ನನ್ನ ಬೆಂಬಲಕ್ಕಿದ್ದಾರೆ. ನಾನು ಬೇಗನೇ ಗುಣಮುಖನಾಗಲಿದ್ದೇನೆ. ಎಲ್ಲರ ಶುಭ ಹಾರೈಕೆಗೆ ನನ್ನ ಧನ್ಯವಾದಗಳು. ಶೀಘ್ರದಲ್ಲೇ ನಾನು ಪುನರ್ವಸತಿ ಪ್ರಾರಂಭಿಸುತ್ತೇನೆ. ಆದಷ್ಟು ಬೇಗನೇ ಅಂಗಳಕ್ಕೆ ಹಿಂತಿರುಗಲು ಪ್ರಯತ್ನಿಸುತ್ತೇನೆ ಎಂದು ಜಡೇಜಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಏಷ್ಯಾ ಕಪ್ ಟೂರ್ನಿಯ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಬಿದ್ದು ಗಾಯಗೊಂಡಿದ್ದರು. ಇದರಿಂದ ಅವರು ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಜಡೇಜಾ ಬದಲಾಗಿ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಸೆಪ್ಟೆಂಬರ್ನಲ್ಲಿ ಟಿ-20 ವಿಶ್ವಕಪ್ ನಡೆಯಲಿದ್ದು, ಇನ್ನೂ 6 ವಾರಗಳು ಬಾಕಿ ಇವೆ. ರವೀಂದ್ರ ಜಡೇಜಾ ಚೇತರಿಸಿಕೊಂಡಲ್ಲಿ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
ಟೂರ್ನಿಯಿಂದ ಆವೇಶ್ ಖಾನ್ ಔಟ್: ತಂಡದ ಪ್ರಮುಖ ಬೌಲರ್ ಆಗಿದ್ದ ಆವೇಶ್ ಖಾನ್ ಅನಾರೋಗ್ಯದ ಕಾರಣ ಏಷ್ಯಾ ಕಪ್ ಟೂರ್ನಿಯಿಂದ ಹೊರನಡೆದಿದ್ದಾರೆ. ಸೂಪರ್ 4 ಹಂತದ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಅವರು ಅನಾರೋಗ್ಯಕ್ಕೀಡಾಗಿದ್ದರು. ಚೇತರಿಸಿಕೊಳ್ಳದ ಕಾರಣ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಆವೇಶ್ ಖಾನ್ ಬದಲಾಗಿ ದೀಪಕ್ ಚಹರ್ ತಂಡಕ್ಕೆ ಸೇರಿಸಿಕೊಳ್ಳಲಿದ್ದಾರೆ.
ಓದಿ:ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಬಗ್ಗೆ ಮತ್ತೆ ಸುದ್ದಿ: ಆಲಿಯಾ - ರಣಬೀರ್ ಹಾದಿಯಲ್ಲಿ ಲವ್ ಬರ್ಡ್ಸ್