ಮುಂಬೈ(ಮಹಾರಾಷ್ಟ್ರ):ಭಾರತೀಯ ಕ್ರಿಕೆಟ್ ಮಾತ್ರವಲ್ಲ ವಿಶ್ವ ಕ್ರಿಕೆಟ್ನಲ್ಲಿ ಛಾಪು ಮೂಡಿಸಿರುವ ಆರ್ ಅಶ್ವಿನ್ 36ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಿ.ಟೆಕ್ ಪದವಿ ಪಡೆದು ಇಂಜಿನಿಯರ್ ಆಗಬೇಕಿದ್ದ ಈ ಪ್ಲೇಯರ್ ಕ್ರಿಕೆಟ್ ಜಗತ್ತಿನಲ್ಲಿ ಮಿಂಚಿರುವುದು ಮಾತ್ರ ಆಶ್ಚರ್ಯ. ಆರಂಭದಲ್ಲಿ ವೇಗದ ಬೌಲರ್ ಆಗಿ ವೃತ್ತಿ ಜೀವನ ಆರಂಭಿಸಿದ ತಮಿಳುನಾಡು ಮೂಲದ ಅಶ್ವಿನ್ ಇದೀಗ ಸ್ಪಿನ್ನರ್ ಆಗಿ ಟೀಂನಲ್ಲಿ ಆಡುತ್ತಿದ್ದಾರೆ.
ಆಫ್ ಸ್ಪಿನ್ನರ್ ಆಗಿ ಗುರುತಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ತಮ್ಮ ವಿಶೇಷ ಸ್ಪಿನ್ ಬೌಲಿಂಗ್ ಮೂಲಕ ಬ್ಯಾಟರ್ಗಳ ಎದೆಯಲ್ಲಿ ನಡುಕ ಹುಟ್ಟಿಸಿರುವ ಪ್ರತಿಭೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿರುವ ಅಶ್ವಿನ್ 2022ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿಯೂ ಸ್ಥಾನ ಪಡೆದಿದ್ದಾರೆ.
ಇಂಜಿನಿಯರಿಂಗ್ನಲ್ಲಿ ಬಿ.ಟೆಕ್ ಮಾಡಿದ್ದ ಅಶ್ವಿನ್ ಆರಂಭದಲ್ಲಿ ತಮಿಳುನಾಡು ತಂಡದ ಪರ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಇದರ ಜಿತೆಗೆ ಆರಂಭಿಕರಾಗಿ ಬ್ಯಾಟಿಂಗ್ ಸಹ ಮಾಡ್ತಿದ್ದರು. ತದನಂತರ ತಮ್ಮ ಬೌಲಿಂಗ್ ಶೈಲಿಯಲ್ಲಿ ಬದಲಾವಣೆ ಮಾಡಿಕೊಂಡು ಸ್ಪಿನ್ನರ್ ಆಗುತ್ತಾರೆ. ಇವರ ಬೌಲಿಂಗ್ ಮೋಡಿಗೆ ಫಿದಾ ಆಗುವ ಬಿಸಿಸಿಐ ಹಿರಿಯರ ತಂಡದಲ್ಲೂ ಅವಕಾಶ ನೀಡುತ್ತಾರೆ. ತದನಂತರ ಹಿಂತಿರುಗಿ ನೋಡದ ಸ್ಪಿನ್ ಮಾಂತ್ರಿಕ ಅತಿ ಕಡಿಮೆ ಇನ್ನಿಂಗ್ಸ್ನಲ್ಲಿ ಭಾರತದ ಪರ 50 ವಿಕೆಟ್, 100, 150 ಹಾಗೂ 400 ವಿಕೆಟ್ ಪಡೆದ ಬೌಲರ್ ಆಗಿ ಹೊರಹೊಮ್ಮುತ್ತಾರೆ. 2016ರಲ್ಲಿ ಐಸಿಸಿ ಕ್ರಿಕೆಟಿಗ ಎಂಬ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ.