ಆರ್ ಅಶ್ವಿನ್ ಭಾರತದ ವಿಭಿನ್ನ ಸ್ಪಿನ್ ಬೌಲರ್ ಎಂಬುದ ಎಲ್ಲರಿಗೂ ತಿಳಿದಿರುವ ಸಂಗತಿ. ಯಾವುದೇ ಎದುರಾಳಿ ತಂಡ ಇರಲಿ ಭಾರತ ಸ್ಪಿನ್ನರ್ಗಳ ಎದುರು ಮಣಿಯುತ್ತಾರೆ. ವಿಶೇಷವಾಗಿ ರವಿಚಂದ್ರನ್ ಅಶ್ವಿನ್ ಅವರ ಕೇರಮ್ ಬೌಲ್ಗೆ ಬಲಿಯಾಗುತ್ತಾರೆ. ಅಶ್ವಿನ್ ಅಪರೂಪದ ಬೌಲಿಂಗ್ ಶೈಲಿಯನ್ನು ಒಲಿಸಿಕೊಂಡಿದ್ದಾರೆ. ಇದೇ ಅವರ ಅಸ್ತ್ರ. ಈಗ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಈ ಸ್ಪಿನ್ ಮಾಂತ್ರಿಕ ತಮ್ಮ ಕೈಗಳಿಂದ ಒಂದಿಷ್ಟು ಜಾದೂ ಮಾಡಿದರೆ, ಕ್ರಿಕೆಟ್ ಲೋಕದ ದೊಡ್ಡ ದೊಡ್ಡ ದಾಖಲೆಗಳನ್ನು ಬರೆಯಲಿದ್ದಾರೆ. ಆದರೆ, ಅವರಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆದಂತೆ ಅವಕಾಶ ಸಿಕ್ಕದಿದ್ದಲ್ಲಿ ದಾಖಲೆಗಳ ನಿರ್ಮಾಣ ಕಷ್ಟ ಇದೆ.
ಆದರೆ ವೆಸ್ಟ್ ಇಂಡೀಸ್ ಪಿಚ್ನಲ್ಲಿ ಭಾರತ ಇಬ್ಬರು ಸ್ಪಿನ್ ಬೌಲರ್‌ಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ವೆಸ್ಟ್ ಇಂಡೀಸ್ ಸರಣಿಯ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಅವಕಾಶ ಅಶ್ವಿನ್‌ಗೆ ಸಿಕ್ಕರೆ, ಅವರು ಅನೇಕ ದಾಖಲೆಗಳನ್ನು ಮಾಡುತ್ತಾರೆ. ವೆಸ್ಟ್ ಇಂಡೀಸ್ ವಿರುದ್ಧ ಅತಿ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್‌ಗಳ ಸಾಲಿಗೆ ಸೇರುವುದರ ಜೊತೆಗೆ, 700 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪಡೆದ ಮೊದಲ ಭಾರತೀಯ ಆಟಗಾರನಾಗುತ್ತಾರೆ.
2010 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅಶ್ವಿನ್ ಅವರು 25.93 ರ ಸರಾಸರಿಯಲ್ಲಿ ಮತ್ತು 3.37 ರ ಎಕಾನಮಿ ರೇಟ್‌ನಲ್ಲಿ ಒಟ್ಟು 697 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಎಲ್ಲ ಮೂರು ಸ್ವರೂಪಗಳಲ್ಲಿ 270 ಪಂದ್ಯಗಳನ್ನು ಆಡಿದ್ದಾರೆ. 700 ವಿಕೆಟ್‌ಗಳ ಮೈಲಿಗಲ್ಲು ತಲುಪಲು ಅವರಿಗೆ ಕೇವಲ 3 ವಿಕೆಟ್‌ಗಳ ಅಗತ್ಯವಿದೆ. ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿರುವ ವಿಶ್ವ ಶ್ರೇಷ್ಟ ಬೌಲರ್ ಅಶ್ವಿನ್ 32 ಬಾರಿ ಕನಿಷ್ಠ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.