ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಟಾರ್ ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಹೊಸ ಮೈಲಿಗಲ್ಲು ತಲುಪಿದ್ದಾರೆ. ಆಸೀಸ್ ವಿರುದ್ಧ ಅಶ್ವಿನ್ ನೂರು ಟೆಸ್ಟ್ ವಿಕೆಟ್ಗಳನ್ನು ಪಡೆದ ಸಾಧನೆ ಮಾಡಿದರೆ, ಇನ್ನೊಂದೆಡೆ, ಜಡೇಜಾ ಟೆಸ್ಟ್ ವೃತ್ತಿ ಜೀವನದಲ್ಲಿ 250 ವಿಕೆಟ್ಗಳನ್ನು ಕಬಳಿಸಿ ಹೊಸ ದಾಖಲೆ ಸೃಷ್ಟಿಸಿದರು.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಪಡೆ ಉತ್ತಮ ಆರಂಭ ಪಡೆಯಿತು. ಓಪನರ್‌ಗಳಾದ ಡೇವಿಡ್ ವಾರ್ನರ್ ಮತ್ತು ಉಸ್ಮಾನ್ ಖವಾಜಾ ಮೊದಲ ವಿಕೆಟ್ಗೆ 50 ರನ್ಗಳ ಜೊತೆಯಾಟ ನೀಡಿದರು. ಆದರೆ, 44 ಎಸೆತಗಳಲ್ಲಿ ಮೂರು ಬೌಂಡರಿಗಳೊಂದಿಗೆ 15 ರನ್ಗಳು ಗಳಿಸಿದ್ದ ವಾರ್ನರ್ ಅವರನ್ನು ಮೊಹಮ್ಮದ್ ಶಮಿ ಪೆವಿಲಿಯನ್ಗಟ್ಟಿದರು.
ಪ್ರಮುಖ ವಿಕೆಟ್ ಉರುಳಿಸಿದ ಆಶ್ವಿನ್:ರವಿಚಂದ್ರನ್ ಅಶ್ವಿನ್ 23ನೇ ಓವರ್‌ನಲ್ಲಿ ವಿಶ್ವದ ನಂ.1 ಟೆಸ್ಟ್ ಬ್ಯಾಟರ್ ಮಾರ್ನಸ್ ಲ್ಯಾಬುಶಾನೆ ಹಾಗೂ ನಂ.2 ಬ್ಯಾಟರ್ ಸ್ಟೀವ್ ಸ್ಮಿತ್ ಅವರ ವಿಕೆಟ್ ಉರುಳಿಸಿ ಆಸೀಸ್ ತಂಡಕ್ಕೆ ಶಾಕ್ ನೀಡಿದರು. 25 ಎಸೆತಗಳಲ್ಲಿ ನಾಲ್ಕು ಬೌಂಡರಿಗಳ ಸಮೇತ 18 ರನ್ಗಳು ಬಾರಿಸಿದ್ದ ಲ್ಯಾಬುಶಾನೆ ಅವರನ್ನು ತಮ್ಮ ನಾಲ್ಕನೇ ಎಸೆತದಲ್ಲಿ ಅಶ್ವಿನ್ ಎಲ್ಬಿ ಬಲೆಗೆ ಕೆಡವಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಸ್ಟೀವ್ ಸ್ಮಿತ್ ಅವರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಶೂನ್ಯ ಸುತ್ತಿ ಪೆವಿಲಿಯನತ್ತ ಹೆಜ್ಜೆ ಹಾಕಿದರು.
47ನೇ ಓವರ್‌ನ ಕೊನೆಯ ಎಸೆತದಲ್ಲಿ ಅಲೆಕ್ಸ್ ಕ್ಯಾರಿ ಅವರನ್ನೂ ಅಶ್ವಿನ್ ಶೂನ್ಯಕ್ಕೆ ಔಟ್ ಮಾಡಿದರು. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡದ ವಿರುದ್ಧ ಮಾತ್ರವೇ ಶತಕ ವಿಕೆಟ್‌ಗಳ ದಾಖಲೆಯನ್ನು ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಬರೆದರು. ಜೊತೆಗೆ ಭಾರತದ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ಅವರ ನಂತರ 100 ವಿಕೆಟ್ ಪಡೆದ ಎರಡನೇ ಭಾರತೀಯ ಬೌಲರ್ ಎಂಬ ಶ್ರೇಯಕ್ಕೂ ಪಾತ್ರರಾಗಿದ್ದಾರೆ.