ನವದೆಹಲಿ: ಸುಮಾರು 11 ವರ್ಷಗಳ ಹಿಂದೆ ಟೀಂ ಇಂಡಿಯಾ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಭಾರತ ತಂಡ ಶ್ರೀಲಂಕಾ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ಎರಡನೇ ಬಾರಿಗೆ ಏಕದಿನ ಕ್ರಿಕೆಟ್ನ ವಿಶ್ವಕಪ್ ಗೆದ್ದಿದ್ದ ಭಾರತ ತಂಡದ ಪರವಾಗಿ ಧೋನಿ ಅಜೇಯ 91 ರನ್ ಗಳಿಸಿ, ಸಿಕ್ಸರ್ನೊಂದಿಗೆ ಆಟ ಮುಗಿಸಿದ್ದು, ಇನ್ನೂ ಕಣ್ಮುಂದೆ ನಡೆದಂತಿದೆ.
ಈ ಹಿನ್ನೆಲೆಯಲ್ಲಿ ಶನಿವಾರ ನಡೆದ ವಿಶ್ವಕಪ್ ಫೈನಲ್ ಗೆದ್ದ 11ನೇ ವಾರ್ಷಿಕೋತ್ಸವ ಅಂಗವಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಕಾಮೆಂಟೇಟರ್ ರವಿಶಾಸ್ತ್ರಿ ಮತ್ತೊಮ್ಮೆ ಕಾಮೆಂಟರಿ ಹೇಳುವ ಮೂಲಕ ಅಭಿಮಾನಿಗಳು ರಂಜಿಸಿದರು. ಶನಿವಾರ ರಾತ್ರಿ ಗುಜರಾತ್ ಮತ್ತು ದೆಹಲಿ ನಡುವಿನ ಪಂದ್ಯದ ಇನಿಂಗ್ಸ್ ವಿರಾಮದ ವೇಳೆ, ಚಾನೆಲ್‌ನ ನಿರೂಪಕರು ಶಾಸ್ತ್ರಿ ಅವರನ್ನು 2011ರ ಏಕದಿನ ವಿಶ್ವಕಪ್ ಫೈನಲ್‌ನ ಕೊನೆಯ ನಿಮಿಷದ ಕಾಮೆಂಟರಿಯನ್ನು ಹೇಳುವಂತೆ ಕೇಳಿಕೊಂಡರು. ಪಂದ್ಯದ ವೇಳೆಯಲ್ಲಿ ಇಂಗ್ಲಿಷ್ನಲ್ಲಿ ಕಾಮೆಂಟರಿ ಮಾಡಿದ್ದು, ಹಿಂದಿಯಲ್ಲಿ ಕಾಮೆಂಟರಿ ಮಾಡುವಂತೆ ಕೇಳಿಕೊಂಡಿದ್ದರು.