ನವದೆಹಲಿ:ಏಷ್ಯಾ ಕಪ್ ಟೂರ್ನಿಯಿಂದ ಭಾರತ ಅಧಿಕೃತವಾಗಿ ಹೊರಬಿದ್ದಿದ್ದಕ್ಕೆ ಅಭಿಮಾನಿಗಳಿಗೆ ಭಾರೀ ನಿರಾಸೆ ಉಂಟಾಗಿದೆ. ಹಾಲಿ ಚಾಂಪಿಯನ್ ಭಾರತ ಈ ಬಾರಿಯೂ ಪ್ರಶಸ್ತಿಯನ್ನು ಉಳಿಸಿಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಬೌಲರ್ಗಳ ದಯನೀಯ ಪ್ರದರ್ಶನದಿಂದ ಪಾಕಿಸ್ತಾನ ಮತ್ತು ಶ್ರೀಲಂಕಾ ವಿರುದ್ಧ ಸೋಲುಂಡು ಟೂರ್ನಿಯಿಂದ ಕಿಕೌಟ್ ಆಗಿದೆ. ತಂಡದ ಬೌಲಿಂಗ್ ಪಡೆಗೆ ಅನುಭವಿ ಬೌಲರ್ ಮೊಹಮದ್ ಶಮಿಯನ್ನು ಆಯ್ಕೆ ಮಾಡದೇ ಇರುವುದು ಪ್ರಶ್ನೆ ಟೀಕೆಗೆ ಗುರಿಯಾಗಿದೆ.
ಭಾರತ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಕೂಡ ಏಷ್ಯಾಕಪ್ ತಂಡದಿಂದ ವೇಗದ ಬೌಲರ್ ಮೊಹಮದ್ ಶಮಿಯನ್ನು ಹೊರಗಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಯ್ಕೆ ಸಮಿತಿಯ ಈ ನಿರ್ಧಾರ ಸಂಪೂರ್ಣವಾಗಿ ದಿಗ್ಭ್ರಮೆಗೊಳಿಸಿದೆ. ಮೊಹಮದ್ ಶಮಿ ಮನೆಯಲ್ಲಿ ಕುಳಿತು ಟಿವಿ ವೀಕ್ಷಿಸುವಂತೆ ಮಾಡಿರುವುದು ನನ್ನನ್ನು ಕಂಗೆಡಿಸಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ತಂಡದಲ್ಲಿ ಕೇವಲ ಮೂವರು ವೇಗಿಗಳಿಂದ ಟೂರ್ನಿ ಆರಂಭಿಸಿದ ಭಾರತದ ನಡೆಯೇ ಅಚ್ಚರಿಯಾಗಿದೆ. ಇದರಲ್ಲಿ ಆವೇಶ್ ಖಾನ್ ಅನಾರೋಗ್ಯಕ್ಕೀಡಾದರು. ಭುವನೇಶ್ವರ್ ಮತ್ತು ಅರ್ಷದೀಪ್ ಮಾತ್ರ ಬೌಲಿಂಗ್ ಪಡೆಯಲ್ಲಿದ್ದರು. ಮೂರನೇ ವೇಗಿಯಾಗಿ ಹಾರ್ದಿಕ್ ಆಯ್ಕೆಯಾಗಿದ್ದರು. ಇದಿಷ್ಟು ತಂಡವನ್ನು ಗೆಲ್ಲಿಸಲು ಸಾಕಾಗಲಿಲ್ಲ. ಮೂರನೇ ಮುಖ್ಯ ವೇಗಿಯ ಇಲ್ಲದಿರುವುದು ತಂಡದ ಬಲವನ್ನು ಕುಂದಿಸಿತು ಎಂದು ಅಭಿಪ್ರಾಯಪಟ್ಟರು.