ವೆಸ್ಟ್ ಇಂಡೀಸ್:ಯುಎಇನಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಮಹಾ ಸಮರಕ್ಕೆ ಕೆರಿಬಿಯನ್ ತಂಡ ಆಯ್ಕೆಯಾಗಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್ ಆಯ್ಕೆ ಸಮಿತಿಯು 15 ಸದಸ್ಯರನ್ನೊಳಗೊಂಡ ಬಲಿಷ್ಠ ತಂಡ ಪ್ರಕಟಿಸಿದ್ದು, 6 ವರ್ಷಗಳ ಬಳಿಕ ವೇಗಿ ರವಿ ರಾಮ್ಪಾಲ್ ಮರಳಿ ಸ್ಥಾನ ಪಡೆದಿದ್ದಾರೆ.
ಈಗಾಗಲೇ ಬಹುತೇಕ ದೇಶಗಳು ಚುಟುಕು ಕ್ರಿಕೆಟ್ ಟೂರ್ನಿಗೆ ತಂಡಗಳನ್ನು ಆಯ್ಕೆ ಮಾಡಿವೆ. ವಿಂಡೀಸ್ ತಂಡವೂ ಘೋಷಣೆಯಾಗಿದ್ದು, ವಿಶ್ವಕಪ್ನಲ್ಲಿ ಕಿರನ್ ಪೊಲಾರ್ಡ್ ನಾಯಕತ್ವದಲ್ಲಿ ಭಾಗಿಯಾಗಲಿದೆ. ಸ್ಪಿನ್ನರ್ ಸುನಿಲ್ ನರೇನ್ ಹಾಗೂ 2016ರ ಟಿ-20 ವಿಶ್ವಕಪ್ ಹೀರೋ ಕಾರ್ಲೊಸ್ ಬ್ರಾಥ್ವೈಟ್ಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ. 2016ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಬ್ರಾಥ್ವೈಟ್, ಕೊನೆಯ ಓವರ್‌ನಲ್ಲಿ ಬೆನ್ ಸ್ಟೋಕ್ಸ್ಗೆ ಸತತ ನಾಲ್ಕು ಸಿಕ್ಸರ್ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದರು.
6 ವರ್ಷಗಳ ಬಳಿಕ ತಂಡಕ್ಕೆ ಮರಳಿರುವ ರವಿ ರಾಮ್ಪಾಲ್ ಜೊತೆಗೆ ರಾಸ್ಟನ್ ಚೇಸ್ ಕೂಡ ಕಮ್ಬ್ಯಾಕ್ ಮಾಡಿದ್ದಾರೆ. ಟೆಸ್ಟ್ ತಂಡದ ಮಾಜಿ ನಾಯಕ ಆಲ್ರೌಂಡರ್ ಜೇಸನ್ ಹೋಲ್ಡರ್ರನ್ನು ರಿಸರ್ವ್ ಆಟಗಾರನಾಗಿ ಪರಿಗಣಿಸಲಾಗಿದೆ. ಇನ್ನುಳಿದಂತೆ ತಂಡದಲ್ಲಿ ಗೇಲ್, ರಸೆಲ್, ಬ್ರಾವೋ ಅವರನ್ನೊಳಗೊಂಡಂತೆ ಸ್ಫೋಟಕ ಆಟಗಾರರ ದಂಡೇ ಇದೆ. ಅಕ್ಟೋಬರ್ 23ರಂದು ಅಬುಧಾಬಿಯಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ವೆಸ್ಟ್ ಇಂಡೀಸ್ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.
ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಒಮಾನ್‌ನಲ್ಲಿ ಅಕ್ಟೋಬರ್ 17ರಿಂದ ನವೆಂಬರ್ 14ರವರೆಗೆ ಟೂರ್ನಿ ನಡೆಯಲಿದೆ. 2012 ಹಾಗೂ 2016ರಲ್ಲಿ ಡಾರೆನ್ ಸಮಿ ನೇತೃತ್ವದಲ್ಲಿ ವಿಂಡೀಸ್ ತಂಡವು ಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು