ಹೈದರಾಬಾದ್:ಇತ್ತೀಚೆಗೆ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿ 'ಸರಣಿ ಶ್ರೇಷ್ಠ' ಪ್ರಶಸ್ತಿ ಗೆದ್ದ ಭಾರತದ ಸ್ಪಿನ್ ಬೌಲರ್ ರವಿ ಬಿಷ್ಣೋಯ್ ಅವರು ಐಸಿಸಿ ಟಿ20 ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲೇ ಮುಂದುವರೆದಿದ್ದಾರೆ.
ಭಾರತ ಪ್ರಸ್ತುತ ಟೆಸ್ಟ್, ಏಕದಿನ ಮತ್ತು ಟಿ20 ಮಾದರಿಯಲ್ಲಿ ಅಗ್ರಸ್ಥಾನದಲ್ಲಿದೆ. ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಶುಭ್‌ಮನ್ ಗಿಲ್, ಟೆಸ್ಟ್ ಬೌಲಿಂಗ್‌ನಲ್ಲಿ ರವಿಚಂದ್ರನ್ ಅಶ್ವಿನ್, ಆಲ್ರೌಂಡರ್ ರವೀಂದ್ರ ಜಡೇಜ ಅಗ್ರಸ್ಥಾನ ಹೊಂದಿದ್ದಾರೆ.
ಇತ್ತೀಚೆಗೆ ನಡೆದ ಆಸೀಸ್ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ರವಿ ಬಿಷ್ಣೋಯ್ 9 ವಿಕೆಟ್ ಗಳಿಸಿದ್ದರು. ಇವರು ಅಂತಿಮ ಪಂದ್ಯದಲ್ಲಿ ಎರಡು ವಿಕೆಟ್‌ಗಳನ್ನು ಪಡೆದಿದ್ದು 'ಮೆನ್ ಇನ್ ಬ್ಲೂ' ಗೆಲುವಿಗೆ ಪ್ರಮುಖ ಕಾರಣವಾಯಿತು.
ಬಿಷ್ಣೋಯ್ ಅಗ್ರಸ್ಥಾನ ಪಡೆದ ನಂತರ ಅಫ್ಘಾನಿಸ್ತಾನ ತಂಡದ ಸ್ಟಾರ್ ಬೌಲರ್ ರಶೀದ್ ಖಾನ್ ಎರಡನೇ ಸ್ಥಾನಕ್ಕೆ ಕುಸಿದರು. ಇನ್ನುಳಿದಂತೆ ಆದಿಲ್ ರಶೀದ್ ಮತ್ತು ವನಿಂದು ಹಸರಂಗ ಮೂರನೇ ಸ್ಥಾನ ಹಂಚಿಕೊಂಡರೆ, ಮಹೇಶ್ ತೀಕ್ಷಣ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ಭಾರತದ ಸ್ಪಿನ್ನರ್ ಅಕ್ಷರ್ ಪಟೇಲ್ 16 ಸ್ಥಾನ ಮೇಲೇರಿ 11ನೇ ಸ್ಥಾನ ತಲುಪಿದ್ದಾರೆ.
ಭಾರತದ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದಾರೆ. ಈ ಮೂಲಕ ಬ್ಯಾಟಿಂಗ್ ಶ್ರೇಯಾಂಕದಲ್ಲಿ 16 ಸ್ಥಾನ ಮೇಲೇರಿ 19ನೇ ರ್‍ಯಾಂಕ್ ಪಡೆದುಕೊಂಡಿದ್ದಾರೆ. ಆಸೀಸ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಭಾರತ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ನೀಡಿದ ಪ್ರದರ್ಶನದ ಆಧಾರದಲ್ಲಿ 29ನೇ ಸ್ಥಾನ ಪಡೆದುಕೊಂಡಿದ್ದಾರೆ. ಸೂರ್ಯಕುಮಾರ್ ಯಾದವ್ ಅಗ್ರಸ್ಥಾನದಲ್ಲಿ ಮುಂದುವರೆದರೆ, ರುತುರಾಜ್ ಗಾಯಕ್ವಾಡ್ 7ನೇ ಶ್ರೇಯಾಂಕದಲ್ಲಿದ್ದಾರೆ.
ಏಕದಿನ ಕ್ರಿಕೆಟ್ ಶ್ರೇಯಾಂಕ:ಏಕದಿನ ರ್ಯಾಂಕಿಂಗ್‌ನಲ್ಲಿ ಬ್ಯಾಟಿಂಗ್ನಲ್ಲಿ ಶುಭ್‌ಮನ್ ಗಿಲ್ ನಂ.1 ಆಗಿ ಮುಂದುವರೆದರೆ, ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ ಬೌಲಿಂಗ್‌ನಲ್ಲಿ ಮೊದಲ ಸ್ಥಾನ ಉಳಿಸಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಶತಕದಾಟ ಪ್ರದರ್ಶನ ನೀಡಿದ ವೆಸ್ಟ್ ಇಂಡೀಸ್ ಬ್ಯಾಟರ್ ಶಾಯ್ ಹೋಪ್ 5 ಸ್ಥಾನಗಳ ಏರಿಕೆ ಕಂಡು 11ನೇ ಶ್ರೇಯಾಂಕಕ್ಕೆ ಜಿಗಿದಿದ್ದಾರೆ.
ಟೆಸ್ಟ್ ಕ್ರಿಕೆಟ್ ಶ್ರೇಯಾಂಕ: ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ನಂತರ ರ್ಯಾಂಕಿಂಗ್‌ನಲ್ಲಿ ಕೆಲವು ಬದಲಾವಣೆಗಳಾಗಿವೆ. ಬಾಂಗ್ಲಾ ಟೈಗರ್ಸ್ ವಿರುದ್ಧ ಘರ್ಜಿಸಿದ ಕಿವೀಸ್ ಬ್ಯಾಟರ್ ಡ್ಯಾರಿಲ್ ಮಿಚೆಲ್ ಒಂದು ಸ್ಥಾನ ಏರಿಕೆ ಕಂಡು ಏಳನೇ ಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ಅನುಭವಿ ಬ್ಯಾಟರ್ ಕೇನ್ ವಿಲಿಯಮ್ಸನ್ ಟೆಸ್ಟ್ ಬ್ಯಾಟರ್ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದರೆ, ಬಾಂಗ್ಲಾದೇಶದ ನಾಯಕ ನಜ್ಮುಲ್ ಹೊಸೈನ್ ಶಾಂಟೊ 13 ಸ್ಥಾನ ಮೇಲೇರಿ 42ನೇ ರ್‍ಯಾಂಕಿಂಗ್ ಸಾಧಿಸಿದ್ದಾರೆ.
ಇದನ್ನೂ ಓದಿ:ಚೆಂಡನ್ನು ಕೈಯಿಂದ ತಳ್ಳಿ ಫೀಲ್ಡಿಂಗ್‌ಗೆ ಅಡ್ಡಿ: ಬಾಂಗ್ಲಾ ಕ್ರಿಕೆಟಿಗ ಮುಶ್ಫಿಕರ್ ರಹೀಮ್ ಔಟ್