ಕೋಲ್ಕತ್ತಾ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಈವರೆಗೆ ಆಡಿರುವ ಎಲ್ಲಾ ಪಂದ್ಯಗಳಲ್ಲೂ ಗೆಲುವು ಸಾಧಿಸಿದ್ದು, ಸೆಮಿಫೈನಲ್ ಪ್ರವೇಶಿಸಿದೆ. ಪ್ರಮುಖವಾಗಿ ಬ್ಯಾಟರ್ ಮತ್ತು ಬೌಲರ್ಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಂಘಟಿತ ಪ್ರದರ್ಶನದ ಫಲದಿಂದ ಭಾರತ ಸತತ 8 ಗೆಲುವುಗಳನ್ನು ಸಾಧಿಸಿದೆ.
ಭಾರತದ ಬ್ಯಾಟಿಂಗ್ ಲೈನ್ಅಪ್ ಉತ್ತಮ ಪ್ರದರ್ಶನ ನೀಡುತ್ತಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಸೇರಿದಂತೆ ಎಲ್ಲಾ ಅಟಗಾರರು ಉತ್ತಮ ಲಯದಲ್ಲಿದ್ದಾರೆ. ಇದರೊಂದಿಗೆ ರೋಹಿತ್ ಶರ್ಮಾರ ಸ್ಪೋಟಕ ಬ್ಯಾಟಿಂಗ್ ಉತ್ತಮ ರನ್ ಗಳಿಕೆ ಮಾಡುವುದರಲ್ಲಿ ಹೆಚ್ಚು ಸಹಾಯವಾಗುತ್ತಿದೆ.
ಆರಂಭಿಕ ಆಟಗಾರ ರೋಹಿತ್ ಶರ್ಮಾರ ಆಕ್ರಮಣಕಾರಿ ಬೀಸಾಟ ತಂಡಕ್ಕೆ ಹೆಚ್ಚು ಉಪಯುಕ್ತವಾಗಿದೆ ಎಂದು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಹೇಳಿದ್ದಾರೆ. ರೋಹಿತ್ ಈ ವಿಶ್ವಕಪ್ನಲ್ಲಿ ಆಡಿರುವ 8 ಪಂದ್ಯಗಳಲ್ಲಿ ಒಂದು ಶತಕ, ಎರಡು ಅರ್ಧಶತಕ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ.
ಭಾನುವಾರ ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯದಲ್ಲಿ ರೋಹಿತ್ ಅತ್ಯುತ್ತಮ ಆರಂಭ ಒದಗಿಸಿದ್ದರು. 24 ಎಸೆತದಲ್ಲಿ 40 ರನ್ ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತ್ತು. ದಕ್ಷಿಣ ಆಫ್ರಿಕಾ ಕೇವಲ 83 ರನ್ಗೆ ಆಲ್ಔಟ್ ಆಗಿದ್ದು, ಭಾರತ 243 ರನ್ಗಳ ಪ್ರಚಂಡ ಗೆಲುವು ದಾಖಲಿಸಿತ್ತು.
ಪಂದ್ಯದಲ್ಲಿ ರೋಹಿತ್ ಶರ್ಮಾ ಪಾತ್ರ ಮಹತ್ವದ್ದಾಗಿತ್ತು. ದ.ಆಫ್ರಿಕಾದ ಬೌಲರ್ಗಳಾದ ಲುಂಗಿ ಎಂಗಿಡಿ ಮತ್ತು ಮಾರ್ಕೋ ಜಾನ್ಸ್ಸೆನ್ ಅವರನ್ನು ರೋಹಿತ್ ಬೆಂಡೆತ್ತಿದರು. ಅಬ್ಬರದ ಬ್ಯಾಟಿಂಗ್ನಿಂದಾಗಿ ಭಾರತವು ಪವರ್ ಪ್ಲೇಯಲ್ಲಿ ಒಂದು ವಿಕೆಟ್ ನಷ್ಟಕ್ಕೆ 91 ರನ್ ಗಳಿಸಿತ್ತು. ಬಳಿಕ ವಿರಾಟ್ ಮತ್ತು ಶ್ರೇಯಸ್ ಅಯ್ಯರ್ ಮಧ್ಯಮ ಕ್ರಮಾಂಕದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನಡೆಸಿದರು. ಶ್ರೇಯಸ್ ಅಯ್ಯರ್ 87 ಎಸೆತದಲ್ಲಿ 77 ರನ್ ಗಳಿಸಿದರೆ, ರೋಹಿತ್ ಶರ್ಮಾ ಜೊತೆಗೂಡಿ 134 ರನ್ಗಳ ಜೊತೆಯಾಟವಾಡಿದರು.
ಅಯ್ಯರ್ ಯಾವಾಗಲೂ ಹೀಗೆಯೇ ಆಡುತ್ತಾರೆ. ಅವರು ತಂಡಕ್ಕಾಗಿ ಹೆಚ್ಚು ರನ್ ಗಳಿಸಿದ್ದಾರೆ. ಒಂದೆರಡು ಪಂದ್ಯಗಳು ಅವರ ಸಾಮರ್ಥ್ಯವನ್ನು ಅಳೆಯುವುದಿಲ್ಲ. ಖಂಡಿತವಾಗಿಯೂ ಅವರು ತಂಡಕ್ಕೆ ಹೆಚ್ಚು ಕೊಡುಗೆ ನೀಡುತ್ತಾರೆ ಎಂದು ಎಂದು ರಾಥೋಡ್ ಹೇಳಿದರು. ಅಯ್ಯರ್ ಎಂಟು ಪಂದ್ಯಗಳಲ್ಲಿ 3 ಅರ್ಧಶತಕ ಗಳಿಸಿದ್ದಾರೆ.
ನಾವು ನಮ್ಮ ಕ್ರಿಕೆಟ್ ಆಟದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ. ಎದುರಾಳಿಗಳ ಬಗ್ಗೆ ಚಿಂತಿಸಿಲ್ಲ. ನಾವು ತಂಡವಾಗಿ ಎಲ್ಲವನ್ನೂ ಸಾಧಿಸಿದ್ದೇವೆ. ಇದು ಬದಲಾವಣೆ ಆಗದು ಎನ್ನುತ್ತಾರೆ ರಾಥೋರ್.
ನವೆಂಬರ್ 12ರಂದು ಭಾರತ-ನೆದರ್ಲೆಂಡ್ಸ್ ನಡುವಿನ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಭಾರತ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಅಂಕಪಟ್ಟಿಯಲ್ಲೂ ಅಗ್ರಸ್ಥಾನ ಕಾಯ್ದುಕೊಂಡಿದ್ದು, ಮುಂದಿನ ಪಂದ್ಯಗಳಲ್ಲೂ ಉತ್ತಮ ಪ್ರದರ್ಶನ ನೀಡುವ ತವಕದಲ್ಲಿದೆ.
ಇದನ್ನೂ ಓದಿ:ವಿಶ್ವಕಪ್ : ನಾಳೆ ಆಸ್ಟ್ರೇಲಿಯಾ - ಅಫ್ಘಾನ್ ಪಂದ್ಯ; ಸೆಮೀಸ್ಗೆ ಲಗ್ಗೆ ಇಡಲು ಪೈಪೋಟಿ