ಕೋಲ್ಕತ್ತಾ:ರಣಜಿ ಟ್ರೋಫಿಯಲ್ಲಿ ಬಂಗಾಳ ತಂಡದ ಆಟಗಾರರು ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಜಾರ್ಖಂಡ್ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎರಡು ಶತಕ ಸೇರಿದಂತೆ 9 ಮಂದಿ ಅರ್ಧಶತಕ ಸಿಡಿಸಿ 129 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.
1893ರಲ್ಲಿ ಆಸ್ಟ್ರೇಲಿಯಾದ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಆಕ್ಸ್ಫರ್ಡ್ ಮತ್ತು ಕೇಂಬ್ರಿಡ್ಜ್ ತಂಡಗಳ ಮಧ್ಯೆ ನಡೆದ ಪಂದ್ಯದಲ್ಲಿ ಆಕ್ಸಫರ್ಡ್ ತಂಡದ 8 ಬ್ಯಾಟ್ಸ್ಮನ್ಗಳು 50+ ರನ್ ಬಾರಿಸಿದ್ದರು. ಒಟ್ಟಾರೆ 833 ರನ್ ಬಾರಿಸಿದ್ದರು. ಇದೀಗ ಆ ದಾಖಲೆಯನ್ನು ಬಂಗಾಳ ತಂಡ ಮೀರಿಸಿದೆ.
ರಣಜಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಂಗಾಳ ತಂಡದ 9 ಬ್ಯಾಟರ್ಗಳು 50ಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇದರಲ್ಲಿ ಸುದೀಪ್ ಘರಾಮಿ(186), ಮಜುಂದಾರ್ (117) ಶತಕ ಸಿಡಿಸಿದ್ದಾರೆ. ತಂಡ 7 ವಿಕೆಟ್ ನಷ್ಟಕ್ಕೆ 773 ರನ್ಗಳ ಬೃಹತ್ ಮೊತ್ತವನ್ನು ಪೇರಿಸಿದೆ.
ಅರುಣ್ ಲಾಲ್ ಪ್ರಶಂಸೆ: ಬಂಗಾಳ ತಂಡದ ಈ ಸಾಧನೆಗೆ ಬಂಗಾಳ ಕ್ರಿಕೆಟ್ ಮುಖ್ಯಸ್ಥ ಅರುಣ್ ಲಾಲ್ ಪ್ರಶಂಸೆಯ ಸುರಿಮಳೆಗೈದಿದ್ದಾರೆ. 'ತಂಡ ದಾಖಲೆಗಾಗಿ ಆಡುತ್ತಿಲ್ಲ. ಅದು ಆಟದ ಮಧ್ಯೆ ಸಂಭವಿಸಿದೆ. ಬೌಲರ್ ಆಗಿದ್ದರೂ 9 ಸ್ಥಾನದಲ್ಲಿ ಆಡಲು ಬಂದ ಆಕಾಶ್ ದೀಪ್ 18 ಎಸೆತಗಳಲ್ಲಿ 53 ರನ್ ಸಿಡಿಸಿದ್ದಾರೆ. ಇದರಲ್ಲಿ 8 ಸಿಕ್ಸರ್ಗಳಿವೆ. ಇದು ತಂಡದ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಅಸಾಧಾರಣ ಕ್ರಿಕೆಟಿಗರ ಗುಂಪು ಇದಾಗಿದೆ. ಇವರ ಸಾಧನೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ದಕ್ಷಿಣ ಆಫ್ರಿಕಾ-ಭಾರತ ಕ್ರಿಕೆಟ್ ಸರಣಿಯಿಂದ ರಾಹುಲ್, ಕುಲದೀಪ್ ಔಟ್; ಪಂತ್ಗೆ ನಾಯಕತ್ವ