ಗುವಾಹಟಿ: ಭಾರತಕ್ಕೆ 5ನೇ ಅಂಡರ್ 19 ವಿಶ್ವಕಪ್ ತಂದುಕೊಟ್ಟ ನಾಯಕ ಯಶ್ ಧುಲ್ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ.
ಗುರುವಾರ ತಮಿಳುನಾಡು ವಿರುದ್ಧ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಯಶ್ ಧುಲ್ ಭೋಜನ ವಿರಾಮದ ವೇಳೆಗೆ ಸಿಡಿಸಿದ್ದ ಅರ್ಧಶತಕವನ್ನು ಶತಕವಾಗಿ ಪರಿವರ್ತಿಸಿ ವಿಕೆಟ್ ಒಪ್ಪಿಸಿದರು.
ಅತ್ಯುತ್ತಮ ಗುಣಮಟ್ಟವುಳ್ಳ ತಮಿಳುನಾಡು ಬೌಲರ್ಗಳ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದ ಧುಲ್ ಕೇವಲ 59 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರಲ್ಲಿ 10 ಬೌಂಡರಿಗಳಿದ್ದವು. ಕೆಟ್ಟ ಎಸೆತಗಳನ್ನು ಅತ್ಯುತ್ತಮವಾಗಿ ದಂಡಿಸಿದ 19 ವರ್ಷದ ಬ್ಯಾಟರ್ 133 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿದರು, ಅಂತಿಮವಾಗಿ 150 ಎಸೆತಗಳಲ್ಲಿ 18 ಬೌಂಡರಿ ಸಹಿತ 113 ರನ್ಗಳಿಸಿ ಎಂ ಮೊಹಮ್ಮದ್ಗೆ ವಿಕೆಟ್ ಒಪ್ಪಿಸಿದರು.
ಟಾಸ್ ಸೋತು ಬ್ಯಾಟಿಂಗ್ ಮಾಡುತ್ತಿರುವ ದೆಹಲಿ ತಂಡ 60 ಓವರ್ಗಳಿಗೆ 5 ವಿಕೆಟ್ ಕಳೆದುಕೊಂಡು 217 ರನ್ಗಳಿಸಿದೆ. ಅನುಜ್ ರಾವತ್ 16, ಜಾಂಟಿ ಸಿಧು 61 ರನ್ಗಳಿಸಿ ಕ್ರೀಸ್ನಲ್ಲಿದ್ದಾರೆ.
ಯಶ್ ಧುಲ್ ಅಂಡರ್ 19 ವಿಶ್ವಕಪ್ನಲ್ಲಿ 4 ಪಂದ್ಯಗಳಿಂದ 229 ರನ್ ಗಳಿಸಿದ್ದರು. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 82 ರನ್ಗಳಿಸಿ ಗೆಲುವಿನಲ್ಲಿ ಪ್ರಮಖ ಪಾತ್ರವಹಿಸಿದ್ದರು. ಆದರೆ, 2ನೇ ಪಂದ್ಯದ ವೇಳೆ ಕೋವಿಡ್ 19 ಪಾಸಿಟಿವ್ ಕಂಡು ಬಂದಿದ್ದರಿಂದ ಲೀಗ್ನ 2 ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. ಕೋವಿಡ್ನಿಂದ ಚೇತರಿಸಿಕೊಂಡು ಬಾಂಗ್ಲಾದೇಶದ ವಿರುದ್ಧದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಜೇಯ 20, ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ನಲ್ಲಿ 110 ರನ್ ಗಳಿಸಿದ್ದರು.
ಇದನ್ನೂ ಓದಿ:'ಕನಸು ನನಸಾಗಿದೆ..': ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಆಟವಾಡಿದ ರವಿ ಬಿಷ್ಣೋಯಿ