ಕೋಲ್ಕತ್ತಾ:ಇಲ್ಲಿನ ಈಡನ್ ಗಾರ್ಡನ್ ಸ್ಟೇಡಿಯಂನಲ್ಲಿ ನಡೆದ ರಣಜಿ ಟ್ರೋಫಿ ಫೈನಲ್ನಲ್ಲಿ ಸೌರಾಷ್ಟ್ರ ತಂಡ ಬಂಗಾಲವನ್ನು 9 ವಿಕೆಟ್ಗಳಿಂದ ಮಣಿಸಿ ಕಪ್ ಮುಡಿಗೇರಿಸಿಕೊಂಡಿತು. ಈ ಮೂಲಕ ಸೌರಾಷ್ಟ್ರ ಎರಡನೇ ಬಾರಿಗೆ ಪ್ರಶಸ್ತಿಗೆ ಮುತ್ತಿಕ್ಕಿದೆ. ಫೈನಲ್ ಗೆಲ್ಲಲು ಕೇವಲ 12 ರನ್‌ಗಳ ಅಗತ್ಯವಿತ್ತು.
ಮನೋಜ್ ತಿವಾರಿ ಮತ್ತು ಅನುಸ್ತಪ್ ಮಜುಂದಾರ್ ಅವರ ಹೋರಾಟದಿಂದ ಬಂಗಾಲ 241 ರನ್ ಗಳಿಸಲಷ್ಟೇ ಶಕ್ತವಾಗಿ 11 ರನ್ ಮುನ್ನಡೆ ಸಾಧಿಸಿತು. ಇವರಿಬ್ಬರ ಅರ್ಧಶತಕ ಕಾಣಿಕೆ ನಂತರ ತಂಡಕ್ಕೆ ಮತ್ತಾರೂ ನೆರವಾಗಲಿಲ್ಲ. ಸೌರಾಷ್ಟ್ರ ನಾಯಕ ಜಯದೇವ್ ಉನಾದ್ಕತ್ 6 ಮತ್ತು ಚೇತನ್ ಸಕಾರಿಯಾ 3 ವಿಕೆಟ್ ಕಿತ್ತರು.
ಸೌರಾಷ್ಟ್ರಕ್ಕೆ ಗೆಲ್ಲಲು ಬೇಕಿದ್ದ 12 ರನ್ ಗುರಿಯನ್ನು 3 ಓವರ್ನಲ್ಲಿ ಹರ್ವಿಕ್ ದೇಸಾಯಿ(4) ಮತ್ತು ವಿಶ್ವರಾಜ್ ಜಡೇಜಾ (10) ಸಾಧಿಸಿದರು. ಮೊದಲ ಎಸೆತಕ್ಕೆ ಜೇ ಗೋಹಿಲ್ ವಿಕೆಟ್ ಕಳೆದು ಕೊಂಡಿದ್ದರಿಂದ ಸೌರಾಷ್ಟ್ರ 9 ವಿಕೆಟ್ಗಳಿಂದ ಗೆದ್ದು ಸಂಭ್ರಮಿಸಿತು. ಎರಡನೇ ಬಾರಿಗೆ ಪ್ರಶಸ್ತಿ ಗೆಲ್ಲುವ ಆಸೆಯಲ್ಲಿದ್ದ ಬಂಗಾಲ ರನ್ನರ್ ಅಪ್ಗೆ ತೃಪ್ತಿ ಪಟ್ಟುಕೊಂಡಿತು.
ಫೈನಲ್ ಪಂದ್ಯಕ್ಕಾಗಿ ಆಸ್ಟ್ರೇಲಿಯಾದ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದ ಬಿಡುಗಡೆ ಪಡೆದು ತಂಡ ಸೇರಿದ್ದ ಜಯದೇವ್ ಉನಾದ್ಕತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಉನಾದ್ಕತ್ ಅನುಪಸ್ಥಿತಿಯಲ್ಲಿ ನಾಯಕತ್ವ ವಹಿಸಿದ್ದ ಅರ್ಪಿತ್ ವಾಸವಾಡ 10 ಪಂದ್ಯಗಳಲ್ಲಿ 2 ಶತಕ ಮತ್ತು ಒಂದು ದ್ವಿಶತಕ ಸಹಿತ 907 ರನ್ ಗಳಿಸಿ ಪ್ಲೇಯರ್ ಆಫ್ ಸೀರಿಸ್ ಪ್ರಶಸ್ತಿ ಗಳಿಸಿದರು.