ನವದೆಹಲಿ: ರಣಜಿ ಟ್ರೋಫಿಯ ಮೊದಲ ಹಂತವನ್ನು ಫೆಬ್ರವರಿ 10ರಿಂದ ಮಾರ್ಚ್ 15ರವರೆಗೆ ಮತ್ತು ಐಪಿಎಲ್ ಮುಗಿದ ನಂತರ ದ್ವಿತೀಯ ಹಂತವನ್ನು ಮೇ 30ರಿಂದ ಜೂನ್ 26ರವರೆಗೆ ನಡೆಸುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಗುರುವಾರ ತಿಳಿಸಿದ್ದಾರೆ.
ಅಹ್ಮದಾಬಾದ್, ಕೋಲ್ಕತ್ತಾ, ರಾಜ್ ಕೋಟ್, ದೆಹಲಿ, ಗುವಾಹಟಿ, ಕಟಕ್ ತ್ರಿವೆಂಡ್ರಮ್, ಚೆನ್ನೈ ಮತ್ತು ಹರಿಯಾಣದಲ್ಲಿ ಮೊದಲ ಹಂತದ ಪಂದ್ಯವಾಳಿ ನಡೆಯಲಿದೆ.
ನಾವು ರಣಜಿ ಟ್ರೋಫಿ ಆಯೋಜನೆಗಾಗಿ ದೇಶದಾದ್ಯಂತ 9 ಸ್ಥಳಗಳನ್ನು ಆಯ್ಕೆ ಮಾಡಿದ್ದೇವೆ. ಯಾವುದೇ ಅಡ್ಡ ಪರಿಣಾಮ ಮತ್ತು ಅಪಾಯವನ್ನು ತಗ್ಗಿಸಲು ಹಾಗೂ ಬಯೋಬಬಲ್ ವ್ಯವಸ್ಥೆಗೆ ಹೆಚ್ಚು ಹೊರೆಯಾಗುದಿರಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ. ಬಯೋಬಬಲ್ ಉಲ್ಲಂಘಿಸುವ ಸಾಧ್ಯತೆ ಇರುವುದರಿಂದ ನಾವು ನಮ್ಮ ಹಿಂದಿನ ಅನುಭವವನ್ನು ಪರಿಗಣಿಸಿ, ಕೆಲವು ಯೋಜನೆಗಳನ್ನು ರೂಪಿಸಿದ್ದೇವೆ ಎಂದು ಜಯ್ ಶಾ ಬಿಸಿಸಿಐ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ; ಬೆಂಗಳೂರಿನಲ್ಲಿ ಅಹರ್ನಿಶಿ ಟೆಸ್ಟ್ ಆಯೋಜನೆ ಖಚಿತಪಡಿಸಿದ ಗಂಗೂಲಿ
ಲೀಗ್ ಹಂತದಲ್ಲಿ ಒಂದು ತಂಡ ಮೂರು ಪಂದ್ಯಗಳನ್ನಾಡಲಿದೆ. ಎಲೈಟ್ ಗುಂಪಿನಲ್ಲಿ 4, ಪ್ಲೇಟ್ ಗುಂಪಿನಲ್ಲಿ 7 ತಂಡಗಳಿರಲಿದ್ದು, ಯಾವುದೇ ತಂಡಕ್ಕೂ ತವರಿನಲ್ಲಿ ಆಡುವುದಕ್ಕೆ ಅವಕಾಶವಿಲ್ಲ. ತವರಿನಲ್ಲಿ ಆಡಿಸಿದರೆ ಅಭಿಮಾನಿಗಳು ಸೇರುವ ಸಾಧ್ಯತೆಯಿರುವುದರಿಂದ ತಟಸ್ಥ ಸ್ಥಳಗಳಲ್ಲಿ ಟೂರ್ನಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ.
ಕಳೆದ ವರ್ಷ ಕೋವಿಡ್ 10 ಕಾರಣದಿಂದ 87 ವರ್ಷಗಳ ಸುದೀರ್ಘ ಇತಿಹಾಸವಿರುವ ರಣಜಿ ಟ್ರೋಪಿಯನ್ನು ಮೊದಲ ಬಾರಿಗೆ ರದ್ದುಗೊಳಿಸಲಾಗಿತ್ತು. ಆದರೆ ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಪಿಯನ್ನು ಆಯೋಜಿಸಿದ್ದ ಬೋರ್ಡ್ ಮತ್ತೊಮ್ಮೆ ರಣಜಿ ಟ್ರೋಫಿಯನ್ನು ಮುಂದೂಡಿತ್ತು. ಬಿಸಿಸಿಐ ನಿರ್ಧಾರವನ್ನು ಮಾಜಿ ಕ್ರಿಕೆಟಿಗರು ಮತ್ತು ಅಭಿಮಾನಿಗಳು ಟೀಕಿಸಿದ ನಂತರ ಎರಡು ಹಂತದಲ್ಲಿ ನಡೆಸುವ ನಿರ್ಧಾರವನ್ನು ತೆಗೆದುಕೊಂಡಿದೆ.
- ಎ ಗುಂಪು: ಗುಜರಾತ್, ಮಧ್ಯಪ್ರದೇಶ, ಕೇರಳ ಮತ್ತು ಮೇಘಾಲಯ
- ಬಿ ಗುಂಪು: ಬಂಗಾಳ, ಬರೋಡಾ, ಹೈದರಾಬಾದ್, ಚಂಡೀಗಢ
- ಸಿ ಗುಂಪು: ಕರ್ನಾಟಕ, ರೈಲ್ವೇಸ್, ಜಮ್ಮು ಮತ್ತು ಕಾಶ್ಮೀರ, ಪಾಂಡಿಚೇರಿ
- ಡಿ ಗುಂಪು: ಸೌರಾಷ್ಟ್ರ, ಮುಂಬೈ, ಒಡಿಶಾ, ಗೋವಾ
- ಸಿ ಗುಂಪು : ಆಂಧ್ರ ಪ್ರದೇಶ, ರಾಜಸ್ಥಾನ, ಸೇವೆಗಳು, ಮತ್ತು ಉತ್ತರಾಖಂಡ
- ಎಫ್ ಗುಂಪು: ಪಂಜಾಬ್, ಹಿಮಾಚಲ ಪ್ರದೇಶ, ಹರಿಯಾಣ ಮತ್ತು ತ್ರಿಪುರಾ
- ಜಿ ಗುಂಪು: ವಿದರ್ಭ, ಉತ್ತರ ಪ್ರದೇಶ, ಮಹಾರಾಷ್ಟ್ರ ಮತ್ತು ಅಸ್ಸಾಂ
- ಹೆಚ್ ಗುಂಪು: ದೆಹಲಿ, ತಮಿಳುನಾಡು , ಜಾರ್ಖಂಡ್, ಮತ್ತು ಛತ್ತೀಸ್ಗಢ
- ಪ್ಲೇಟ್ ಗ್ರೂಪ್: ಬಿಹಾರ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ.