ಚೆನ್ನೈ:ಆಲ್ರೌಂಡ್ ಪ್ರದರ್ಶನ ನೀಡಿ ಪುದುಚೇರಿ ವಿರುದ್ಧ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಕರ್ನಾಟಕ ತಂಡ ಇನ್ನಿಂಗ್ಸ್ ಜಯ ಸಾಧಿಸಲು ಅಂತಿಮ ದಿನ ಎದುರಾಳಿಯ 6 ವಿಕೆಟ್ ಪಡೆಯಬೇಕಿದೆ. ಫಾಲೋ ಆನ್ಗೆ ತುತ್ತಾಗಿರುವ ಪುದುಚೇರಿ 3ನೇ ದಿನದಂತ್ಯಕ್ಕೆ 62 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದು, ಇನ್ನೂ 150 ರನ್‌ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿದೆ.
ಶುಕ್ರವಾರ 2 ವಿಕೆಟ್ ಕಳೆದು 33 ರನ್‌ಗಳಿಸಿದ್ದ ಪುದುಚೇರಿ 3ನೇ ದಿನ ಕರ್ನಾಟಕದ ಬೌಲರ್ಗಳ ಮಾರಕ ದಾಳಿಗೆ ತತ್ತರಿಸಿ 241 ರನ್ಗಳಿಗೆ ಸರ್ವಪತನ ಕಂಡಿತು. ನಾಯಕ ದಾಮೋದರನ್ ರೋಹಿತ್ 133 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 100 ರನ್ ಗಳಿಸಿ ಅಜೇಯರಾಗುಳಿದರು. ಇತರೆ ಬ್ಯಾಟರ್ಗಳಿಂದ ಸೂಕ್ತ ಬೆಂಬಲ ಸಿಗದ ಕಾರಣ ಫಾಲೋ ಆನ್ ತಪ್ಪಿಸಲು ಸಾಧ್ಯವಾಗಲಿಲ್ಲ. ಕರ್ನಾಟಕದಿಂದ ವರ್ಗಾವಣೆಗೊಂಡು ಪುದುಚೇರಿಯಲ್ಲಿ ಆಡುತ್ತಿರುವ ಪವನ್ ದೇಶಪಾಂಡೆ 83 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 29 ರನ್ ಬಾರಿಸಿ 6ನೇ ವಿಕೆಟ್ಗೆ ನಾಯಕ ರೋಹಿತ್ ಜೊತೆ 46 ರನ್ ಸೇರಿಸಿದರು. ಆದೆ ಇವರನ್ನ ಕೆ. ಗೌತಮ್ ಪೆವಿಲಿಯನ್ಗಟ್ಟುವಲ್ಲಿ ಯಶಸ್ವಿಯಾದರು.
ಕರ್ನಾಟಕ ಪರ ಕೃಷ್ಣಪ್ಪ ಗೌತಮ್ ಪುದುಚೇರಿ ತಂಡದ ಪ್ರಮುಖ 5 ವಿಕೆಟ್ ಕಬಳಿಸಿದರೆ, ವೇಗಿಗಳಾದ ಪ್ರಸಿಧ್ ಕೃಷ್ಣ ಮತ್ತು ವಿದ್ಯಾಧರ್ ಪಾಟಿಲ್ ತಲಾ 2 ವಿಕೆಟ್ ಪಡೆದ ಎದುರಾಳಿ ತಂಡ ಫಾಲೋ ಆನ್ ಬಲೆಗೆ ಬೀಳುವಂತೆ ಮಾಡಿದರು.