ಚೆನ್ನೈ :ಬ್ಯಾಟಿಂಗ್ ಬೌಲಿಂಗ್ ಎರಡರಲ್ಲೂ ಸಂಘಟಿತ ಪ್ರದರ್ಶನ ತೋರಿದ ಕರ್ನಾಟಕ ತಂಡ ಜಮ್ಮು ಮತ್ತು ಕಾಶ್ಮೀರದ ವಿರುದ್ಧ 117 ರನ್‌ಗಳ ಜಯ ಸಾಧಿಸಿ ರಣಜಿ ಟೂರ್ನಿಯ ಸಿ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಚೆನ್ನೈನ ಐಐಟಿ ಕೆಮ್ಪ್ಲಾಸ್ಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡದ ಗೆಲುವಿಗೆ ಕರ್ನಾಟಕ 508 ರನ್‌ಗಳ ಬೃಹತ್ ಗುರಿ ನೀಡಿತ್ತು. 3ನೇ ದಿನದಾಟದ ಮುಕ್ತಾಯಕ್ಕೆ ಜಮ್ಮು ಮತ್ತು ಕಾಶ್ಮೀರ 4 ವಿಕೆಟ್ ಕಳೆದುಕೊಂಡು 189 ರನ್ ಗಳಿಸಿತ್ತು.
ಪಂದ್ಯದ ಅಂತಿಮ ದಿನವಾದ ಇಂದು ಕರ್ನಾಟಕ ಬೌಲರ್ಗಳು ಎದುರಾಳಿ ತಂಡವನ್ನು 390 ರನ್ಗಳಿಗೆ ಆಲೌಟ್ ಮಾಡಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದರು. ನಿನ್ನೆ ಅರ್ಧಶತಕ ಸಿಡಿಸಿ ಅಜೇಯರಾಗುಳಿದಿದ್ದ ಜಮ್ಮು-ಕಾಶ್ಮೀರ ನಾಯಕ ಇಯಾನ್ ಚೌಹಾಣ್ ಇಂದು ಶತಕ ಪೂರ್ಣಗೊಳಿಸಿದರು.
ಅವರು 188 ಎಸೆತಗಳಲ್ಲಿ 15 ಬೌಂಡರಿ ಮತ್ತು 2 ಸಿಕ್ಸರ್ಗಳ ನೆರವಿನಿಂದ 110 ರನ್ಗಳಿಸಿ ಔಟಾದರೆ, ಇವರಿಗೆ ಸಾಥ್ ನೀಡಿದ ಅಬ್ದುಲ್ ಸಮದ್ 78 ಎಸೆತಗಳಲ್ಲಿ 70 ರನ್ಗಳಿಸಿದರು. ಕೊನೆಯಲ್ಲಿ ಪರ್ವೇಜ್ ರಸೂಲ್ 46, ಅಬೀದ್ ಮುಷ್ತಾಕ್ 43 ರನ್ಗಳಿಸಿ ಕರ್ನಾಟಕ ಬೌಲರ್ಗಳನ್ನು ಸ್ವಲ್ಪ ಸಮಯ ಕಾಡಿದರಾದರೂ ಸೋಲು ತಪ್ಪಿಸಲು ಆಗಲಿಲ್ಲ.
ಕರ್ನಾಟಕ ಪರ ಪ್ರಸಿಧ್ ಕೃಷ್ಣ 59 ಕ್ಕೆ 4, ಶ್ರೇಯಸ್ ಗೋಪಾಲ್ 155ಕ್ಕೆ 4, ಗೌತಮ್ 122ಕ್ಕೆ 2 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಮನೀಶ್ ಪಾಂಡೆ ಪಡೆ ಮಾರ್ಚ್ 3ರಿಂದ ಆರಂಭವಾಗಲಿರುವ ಕೊನೆಯ ಲೀಗ್ ಪಂದ್ಯದಲ್ಲಿ ಪಾಂಡಿಚೇರಿ ತಂಡವನ್ನು ಎದುರಿಸಲಿದೆ.