ತಿರುವನಂತಪುರಂ(ಕೇರಳ):15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಹರಾಜು ಪ್ರಕ್ರಿಯೆಯಲ್ಲಿ ಈಗಾಗಲೇ ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವ ಟೀಂ ಇಂಡಿಯಾ ಮಾಜಿ ಬೌಲರ್ ಎಸ್.ಶ್ರೀಶಾಂತ್ ಇದೀಗ ಕೇರಳ ರಣಜಿ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕೇರಳ ಕ್ರಿಕೆಟ್ ಅಸೋಸಿಯೇಷನ್ನಿಂದ ಘೋಷಣೆಯಾಗಿರುವ 20 ಆಟಗಾರರ ರಣಜಿ ತಂಡದಲ್ಲಿ 39 ವರ್ಷದ ಶ್ರೀಶಾಂತ್ ಅವರಿಗೆ ಅವಕಾಶ ಸಿಕ್ಕಿದೆ. ಈ ಮೂಲಕ 8 ವರ್ಷಗಳ ಬಳಿಕ ರಣಜಿ ತಂಡದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ 2013ರಲ್ಲಿ ಅವರು ಕೊನೆಯದಾಗಿ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದರು.
2013ರಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ್ದ ಶ್ರೀಶಾಂತ್ 7 ವರ್ಷಗಳ ಕಾಲ ಕ್ರಿಕೆಟ್ನಿಂದ ದೂರವಿದ್ದರು. ಆದರೆ ಕೋರ್ಟ್ನಿಂದ ಅವರಿಗೆ ಈಗಾಗಲೇ ಕ್ಲೀನ್ ಚಿಟ್ ಸಿಕ್ಕಿದೆ. ಈಗಾಗಲೇ ಕೇರಳ ತಂಡದ ಪರ ಸೈಯದ್ ಮುಷ್ತಾಕ್ ಅಲಿ ಹಾಗೂ ವಿಜಯ್ ಹಜಾರೆಯಲ್ಲಿ ಆಡಿದ್ದಾರೆ. ಶ್ರೀಶಾಂತ್ ಜೊತೆಗೆ 19 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವರುಣ್ ನಾಯನರ್, 17 ವರ್ಷದ ವೇಗಿ ಈಡನ್ ಆಪಲ್ ಟಾಮ್, ಬಲಗೈ ವೇಗಿ ಫನೂಸ್ ಹಾಗೂ ಆರಂಭಿಕ ಬ್ಯಾಟರ್ ಕೃಷ್ಣನ್ಗೆ ಅವಕಾಶ ಒದಗಿಬಂದಿದೆ.
ಈ ಹಿಂದೆ ಟೀಂ ಇಂಡಿಯಾ ತಂಡದ ಖಾಯಂ ಸದಸ್ಯರಾಗಿದ್ದ ಶ್ರೀಶಾಂತ್ ಎರಡು ಬಾರಿ ವಿಶ್ವಕಪ್ ಗೆದ್ದ ಭಾರತ ಕ್ರಿಕೆಟ್ ತಂಡದ ಭಾಗವಾಗಿದ್ದರು. 2007ರಲ್ಲಿ ನಡೆದ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ವಿಜೇತ ಭಾರತೀಯ ಕ್ರಿಕೆಟ್ ತಂಡದಲ್ಲಿದ್ದರು.
ಇಂಡಿಯನ್ ಪ್ರೀಮಿಯರ್ ಲೀಗ್ಗೋಸ್ಕರ ತಮ್ಮ ಹೆಸರು ನೋಂದಣಿ ಮಾಡಿಕೊಂಡಿರುವ ಈ ಆಟಗಾರ ತಮ್ಮ ಮೂಲ ಬೆಲೆ 50 ಲಕ್ಷ ರೂ. ಎಂದು ಘೋಷಣೆ ಮಾಡಿಕೊಂಡಿದ್ದಾರೆ.