ನವದೆಹಲಿ: ರಾಜಕೀಯ ಬಿಕ್ಕಟ್ಟು ಮತ್ತು ಭದ್ರತೆಯ ಸಮಸ್ಯೆಯಿಂದಾಗಿ ಭಾರತ ಕ್ರಿಕೆಟ್ ತಂಡ ಏಷ್ಯಾಕಪ್‌ಗೆ ಪಾಕಿಸ್ತಾನ ಪ್ರವಾಸವನ್ನು ನಿರಾಕರಿಸಿತು. ಆದರೆ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಆಹ್ವಾನದ ಮೇರೆಗೆ ಏಷ್ಯಾಕಪ್ ವೇಳೆ ಲಾಹೋರ್‌ಗೆ ಭೇಟಿ ನೀಡಲಿದ್ದಾರೆ.
ಇದೇ ತಿಂಗಳ 30 ರಂದು ಏಷ್ಯಾಕಪ್ ಪಂದ್ಯಗಳು ಆರಂಭವಾಗಲಿವೆ. ಪಾಕಿಸ್ತಾನ ಮತ್ತು ನೇಪಾಳ ಮೊದಲ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಭಾರತ ಪಾಕಿಸ್ತಾನ ಪ್ರವಾಸ ನಿರಾಕರಿಸಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದಲ್ಲಿ ಟೀಮ್ ಇಂಡಿಯಾದ ಪಂದ್ಯಗಳು ನಡೆಯಲಿವೆ. ಸೆಪ್ಟೆಂಬರ್ 2 ರಂದು ಭಾರತ ತಂಡ ಪಾಕಿಸ್ತಾನದ ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ.
ಸೆಪ್ಟೆಂಬರ್ 4 ರಿಂದ ಸೆಪ್ಟೆಂಬರ್ 7 ರ ವರೆಗೆ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯಗಳಲ್ಲಿ ಇಬ್ಬರೂ ಅಧಿಕಾರಿಗಳು ಹಾಜರಿರುತ್ತಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಏಷ್ಯಾಕಪ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಎಲ್ಲಾ ಪ್ರಮುಖ ಅಧಿಕಾರಿಗಳನ್ನು ಆಹ್ವಾನಿಸಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್ ರಾಜೀವ್‌ಗೆ ಮಾತ್ರ ಅವಕಾಶ ನೀಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ನಂತರ ಈ ಇಬ್ಬರೂ ಅಧಿಕಾರಿಗಳು ವಾಘಾ ಗಡಿ ಮೂಲಕ ಲಾಹೋರ್‌ಗೆ ತೆರಳಲಿದ್ದಾರೆ.