ಮುಂಬೈ :ಇಶಾನ್ ಕಿಶನ್, ತಿಲಕ್ ವರ್ಮಾರ ಅರ್ಧಶತಕದ ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ರಾಜಸ್ತಾನ ರಾಯಲ್ಸ್ ವಿರುದ್ಧ ಸೋಲು ಕಂಡಿದೆ. ರಾಯಲ್ಸ್ ನೀಡಿದ್ದ 194 ರನ್ಗಳಿಗೆ ಉತ್ತರವಾಗಿ ಮುಂಬೈ ತಂಡ 170 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐಪಿಎಲ್ನ 2ನೇ ಪಂದ್ಯದಲ್ಲೂ 5 ಬಾರಿಯ ಚಾಂಪಿಯನ್ ಮುಂಬೈ ಸೋಲು ಕಂಡಿದೆ.
ಇನಿಂಗ್ಸ್ ಆರಂಭಿಸಿದ ನಾಯಕ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ದೊಡ್ಡ ಮೊತ್ತ ಚೇಸ್ ಮಾಡಲು ಭದ್ರ ಬುನಾದಿ ಹಾಕಿಕೊಡಲಿದ್ದಾರೆ ಎಂದೇ ಭಾವಿಸಲಾಗಿತ್ತು. ಆದರೆ, ನಾಯಕ ರೋಹಿತ್ ಶರ್ಮಾ(10) ಬೇಗನೇ ನಿರ್ಗಮಿಸಿ ನಿರಾಶೆ ಮೂಡಿಸಿದರು. ಬಳಿಕ ಬಂದ ಅನ್ಮೋಲ್ಪ್ರೀತ್ ಸಿಂಗ್(5) ಕೂಡ ಔಟಾದರು. ತಂಡದ ಸಂಕಷ್ಟದ ವೇಳೆ ಜೊತೆಯಾದ ಕಳೆದ ಪಂದ್ಯದ ಹೀರೋ ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ತನಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ದೊಡ್ಡ ಇನ್ನಿಂಗ್ಸ್ ಕಟ್ಟಿದರು.
ತಿಲಕ್ ವರ್ಮಾ 3 ಬೌಂಡರಿ 5 ಭರ್ಜರಿ ಸಿಕ್ಸರ್ ಒಳಗೊಂಡ ಮಹತ್ವದ 61 ರನ್ ಬಾರಿಸಿ ತಮ್ಮ ಶಕ್ತಿ ಪ್ರದರ್ಶಿಸಿದರು. ಇನ್ನೊಂದು ತುದಿಯಲ್ಲಿ ಇಶಾನ್ ಕಿಶನ್ ಕೂಡ ತಾವೇನೂ ಕಮ್ಮಿ ಇಲ್ಲ ಎಂಬಂತೆ ಬ್ಯಾಟ್ ಬೀಸಿ 5 ಬೌಂಡರಿ, 1 ಸಿಕ್ಸರ್ ಸಮೇತ 54 ರನ್ ಬಾರಿಸಿದರು. ಇವರಿಬ್ಬರು ಔಟಾದ ಬಳಿಕ ದಿಢೀರ್ ಕುಸಿತ ಕಂಡ ಮುಂಬೈ ತಂಡ ಮೇಲೇಳಲೇ ಇಲ್ಲ.
ಆಲ್ರೌಂಡರ್ ಕೀರನ್ ಪೋಲಾರ್ಡ್ 22 ರನ್ ಗಳಿಸಿದರೆ, ಉಳಿದ ಬ್ಯಾಟ್ಸಮನ್ಗಳು ಒಂದಂಕಿ ಕೂಡ ದಾಟಲಿಲ್ಲ. ಇದರಿಂದ ತಂಡ ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 170 ರನ್ ಮಾಡಿ ಸೋಲೊಪ್ಪಿಕೊಂಡಿತು.